ಮತ್ತೆ ಕ್ಯಾತೆ ತೆಗೆದ ತಮಿಳುನಾಡು

ಚೆನ್ನೈ:ಜು.25-ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕದ ವಿರುದ್ದ ಸದಾ ಒಂದಿಲ್ಲೊಂದು ಕಾರಣಕ್ಕೆ ಕಾಲು ಕೆರೆದು ಕ್ಯಾತೆ ತೆಗೆಯುವ ತಮಿಳುನಾಡು ಈಗ ಮತ್ತೊಮ್ಮೆ ತಗಾದೆ ತೆಗೆದಿದೆ.

ಕರ್ನಾಟಕ ಸರ್ಕಾರ ಮೇಕೆದಾಟು ಸಮೀಪ ಕುಡಿಯುವ ನೀರು ಬಳಕೆಯ ಉದ್ದೇಶದಿಂದ ಅಣೆಕಟ್ಟು ನಿರ್ಮಾಣ ಮಾಡಲು ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಹೇಳಿದ್ದಾರೆ.

ನಿನ್ನೆಯಷ್ಟೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೇಕೆದಾಟು ಬಳಿ ರಾಜ್ಯ ಸರ್ಕಾರ ಕುಡಿಯುವ ನೀರು ಬಳಕೆಗಾಗಿ ಅಣೆಕಟ್ಟು ಕಟ್ಟಲಿದ್ದೇವೆ. ಮುಂದಿನ ಬಜೆಟ್‍ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇದನ್ನು ಪ್ರಕಟಿಸಲಿದ್ದಾರೆ ಎಂದು ಹೇಳಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು, ಮೇಕೆದಾಟು ಬಳಿ ಕರ್ನಾಟಕ ಸರ್ಕಾರ ಅಣೆಕಟ್ಟು ಕಟ್ಟಲು ನಾವು ಅವಕಾಶ ನೀಡುವುದಿಲ್ಲ. ಒಂದು ವೇಳೆ ನಿರ್ಮಾಣ ಮಾಡಲು ಮುಂದಾದರೆ ನ್ಯಾಯಾಧೀಕರಣ ಹಾಗೂ ಸುಪ್ರೀಂಕೋರ್ಟ್‍ಗೆ ದೂರು ನೀಡುವುದಾಗಿ ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕೆಲವು ದಿನಗಳ ಹಿಂದೆ ತಮಿಳುನಾಡಿಗೆ ಬಂದಾಗ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ಯಾವುದೇ ವಿರೋಧ ವ್ಯಕ್ತಪಡಿಸಬಾರದು. ನಮಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಕೋರಿದ್ದರು.

ಆದರೆ ನಾವು ಯಾವುದೇ ರೀತಿಯ ಆಶ್ವಾಸನೆಯನ್ನು ಕರ್ನಾಟಕ ಸರ್ಕಾರಕ್ಕೆ ನೀಡಿಲ್ಲ. ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಸುಪ್ರೀಂಕೋರ್ಟ್ ತೀರ್ಪಿನಂತೆಯೇ ನಡೆದುಕೊಳ್ಳುತ್ತಿದ್ದೇವೆ. ಎಲ್ಲಿಯೂ ಕೂಡ ಅಣೆಕಟ್ಟು ನಿರ್ಮಾಣ ಮಾಡಲು ನಮ್ಮ ಅಭ್ಯಂತರವಿಲ್ಲ ಎಂದು ನಾವು ಹೇಳಿಲ್ಲವೆಂದು ತಿಳಿಸಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ನಾವು ಈವರೆಗೂ ನ್ಯಾಯಾಲಯದ ತೀರ್ಪನ್ನು ಪಾಲಿಸುತ್ತಾ ಬಂದಿದ್ದೇವೆ. ನೀರು ಹಂಚಿಕೆ, ಅಣೆಕಟ್ಟು ಕಟ್ಟುವುದು ಸೇರಿದಂತೆ ಯಾವುದೇ ರೀತಿಯ ಹೊಸ ಕಾಮಗಾರಿ ಆರಂಭಿಸಬೇಕಾದರೆ, ನ್ಯಾಯಾಲಯದ ಗಮನಕ್ಕೆ ತರಬೇಕು. ಕರ್ನಾಟಕ ಸರ್ಕಾರ ಇದನ್ನು ಹೇಗೆ ಉಲ್ಲಂಘಿಸುತ್ತದೆ ಎಂದು ಪಳನಿಸ್ವಾಮಿ ಪ್ರಶ್ನಿಸಿದರು.

ಸಮುದ್ರಕ್ಕೆ ಯಥೇಚ್ಚವಾಗಿ ಹರಿದು ಹೋಗುವ ನೀರನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಸರ್ಕಾರ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಮೇಕೆದಾಟು ಬಳಿ ಕುಡಿಯುವ ನೀರಿಗಾಗಿ ಬೃಹತ್ ಅಣೆಕಟ್ಟು ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ.

ಹಿಂದಿನ ಕಾಂಗ್ರೆಸ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದರು. ಕೇವಲ ಕುಡಿಯುವ ನೀರಿಗಾಗಿ ಮಾತ್ರ ಈ ಯೋಜನೆಯನ್ನು ಪ್ರಾರಂಭಿಸಲು ಮುಂದಾಗಿದೆ.

Tamil Nadu,Government of Karnataka Mekatutu drinking water project, dam construction,Tamil Nadu Chief Minister Edappadi K Palaniswamy, not allow

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ