ಶಿರೂರು ಶ್ರೀ ಅಕಾಲಿಕ ನಿಧನ ಹಿನ್ನಲೆ: ಪೊಲೀಸರಿಂದ ತನಿಖೆ

ಬೆಂಗಳೂರು, ಜು.20- ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರ ಅಕಾಲಿಕ ನಿಧನಕ್ಕೆ ಸಂಶಯ ವ್ಯಕ್ತಪಡಿಸಿ ಅವರ ಸಹೋದರ ನೀಡಿರುವ ದೂರು ಆಧರಿಸಿ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ನಿಧನದ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ಈ ಸಂಬಂಧ ಶ್ರೀಗಳ ಸಹೋದರ ದೂರು ನೀಡಿದ್ದಾರೆ. ದೂರಿನ ಅಂಶಗಳನ್ನು ಆಧಾರವಾಗಿಟ್ಟುಕೊಂಡೇ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಯಾಣಿಸುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿ ಜಾರಿಕೊಂಡರು.

ರಮೇಶ್‍ಜಾರಕಿಹೊಳಿ ಹಾಗೂ ಬಿಜೆಪಿಯ ನಾಯಕರು ಅಜ್ಮೀರ್ ಪ್ರವಾಸ ಕೈಗೊಂಡಿರುವ ಬಗ್ಗೆ ಅನಗತ್ಯವಾದ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ರಮೇಶ್ ಜಾರಕಿ ಹೊಳಿ ಅವರು ಹರಕೆ ತೀರಿಸಲು ಹೋಗಿದ್ದಾರೆ. ಅವರ ಜತೆ ಬಿಜೆಪಿಯವರೂ ಇದ್ದಾರೆ ಎಂಬ ಕಾರಣಕ್ಕೆ ಮಾಧ್ಯಮಗಳ ಆಂಟೇನ ನೆಟ್ಟಗೆ ನಿಂತುಕೊಂಡಿದೆ. ಊಹಾಪೆÇೀಹ ಸುದ್ದಿಗಳು ಬಿತ್ತರವಾಗುತ್ತಿವೆ ಎಂದು ಹೇಳಿದರು.

ವಿಧಾನಸೌಧದ ಒಳಭಾಗದಲ್ಲಿ ಕಾರ್ಯದರ್ಶಿ ಮೂರ್ತಿ ಅವರು ಖಾಸಗಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರೆ ಅದು ತಪ್ಪು, ಆ ಕುರಿತು ವಿಧಾನಸಭಾಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ. ಒಂದು ವೇಳೆ ಅನುಮತಿ ಪಡೆದು ಆಚರಿಸಿಕೊಂಡಿದ್ದರೆ ಅದು ತಪ್ಪಲ್ಲ ಎಂದು ತಿಳಿಸಿದರು.

ಅವಿಶ್ವಾಸಕ್ಕೆ ಜಯ ಸಿಗಲಿದೆ:
ವಿರೋಧ ಪಕ್ಷಗಳು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ಚರ್ಚೆ ನಡೆಯುತ್ತಿದೆ. ಬಹುಶಃ ಅದು ಜಯಗಳಿಸಲಿದೆ ಎಂಬ ವಿಶ್ವಾಸವಿದೆ. ಇಡೀ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬೆಲೆ ಏರಿಕೆಯಾಗಿದೆ. ಡೀಸೆಲ್, ಪೆಟ್ರೋಲ್ ದರ ದುಬಾರಿಯಾಗಿದೆ. ನೋಟು ಅಮಾನೀಕರಣದಿಂದ ಜನ ತೊಂದರೆಗೀಡಾಗಿದ್ದಾರೆ. ಕಪ್ಪು ಹಣ ವಾಪಸ್ ತಂದಿಲ್ಲ. ಈ ಎಲ್ಲಾ ವಿಷಯಗಳು ಜನರಿಗೆ ಗೊತ್ತಾಗಬೇಕು. ಆ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುತ್ತದೆ. ಆಷಾಢ ಮುಗಿಯುವವರೆಗೂ ಕಾಯಬೇಕು ಎಂದೇನೂ ಇಲ್ಲ. ಹಾಗಾಗಿ ಶೀಘ್ರವೇ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುತ್ತಾರೆ ಎಂದು ಹೇಳಿದರು.

ಕೊಡಗಿನ ತಲಕಾವೇರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ನಾನು ಉದ್ದೇಶ ಪೂರ್ವಕವಾಗಿಯೇ ಹೋಗಿಲ್ಲ. ನನ್ನ ಸಹೋದರನ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಕೇಂದ್ರ ಸ್ಥಾನ ಬಿಟ್ಟು ತೆರಳಬಾರದು ಎಂಬ ಕಾರಣಕ್ಕೆ ನಾನು ಬೆಂಗಳೂರು ಬಿಟ್ಟು ಎಲ್ಲೂ ಹೋಗುತ್ತಿಲ್ಲ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ನೇಮಕಾತಿಯಲ್ಲಿ ಯಾವುದೇ ಅವ್ಯವಹಾರಗಳು ಆಗಿಲ್ಲ. ಈ ಮೊದಲು ಗುತ್ತಿಗೆದಾರರು ಸುಮಾರು 40ಸಾವಿರ ಪೌರಕಾರ್ಮಿಕರನ್ನು ನೇಮಿಸಿಕೊಂಡಿರುವುದಾಗಿ ಹೇಳುತ್ತಿದ್ದರು. ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಅನಂತರ 700 ಜನರಿಗೆ ಒಬ್ಬ ಪೌರ ಕಾರ್ಮಿಕ ಎಂಬ ನಿಯಮ ರೂಪಿಸಲಾಗಿದೆ. ಅದಕ್ಕನುಗುಣವಾಗಿ 18,330 ಕಾರ್ಮಿಕರು ನಮಗೆ ಸಿಕ್ಕಿದ್ದಾರೆ. ಬೇಡಿಕೆ ಇರುವ ಇನ್ನೂ ನಾಲ್ಕು ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಬಿಬಿಎಂಪಿ ನೇರವಾಗಿ ಪೌರಕಾರ್ಮಿಕರನ್ನು ನಿಯೋಜಿಸಿಕೊಳ್ಳಲಾರಂಭಿಸಿದ ಮೇಲೆ ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
shiruru shree,lakshmivara teertha swamiji,investigation,Dr.G.parameshwar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ