ದೇವರೇ ನನಗೆ ಅಧಿಕಾರವನ್ನು ನೀಡಿದ್ದು, ಅದನ್ನು ದೇವರೇ ಕಾಪಾಡುತ್ತಾನೆ: ಸಿಎಂ ಕುಮಾರಸ್ವಾಮಿ

ತಲಕಾವೇರಿ:ಜು-20 ಕೊಡಗು ಜಿಲ್ಲೆಯ ಕಾವೇರಿ ಜನ್ಮಸ್ಥಳ ತಲಕಾವೇರಿಗೆ ಪತ್ನಿ ಹಾಗೂ ಸಂಪುಟದ ಕೆಲವು ಸಹೋದ್ಯೋಗಿಗಳ ಜೊತೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮೂಢನಂಬಿಕೆಯನ್ನು ತಳ್ಳಿಹಾಕಿದ್ದಾರೆ.

ತಲಕಾವೇರಿಗೆ ಮುಖ್ಯಮಂತ್ರಿ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಇಲ್ಲಿ ಮೊದಲಿನಿಂದಲೂ ಇತ್ತು. ಈ ಬಗ್ಗೆ ಮಾತನಾಡಿದ ಅವರು ನಾನು ಇಂತಹ ಮೂಢನಂಬಿಕೆಗಳನ್ನು ನಂಬುವುದಿಲ್ಲ. ಅಧಿಕಾರ ನನಗೆ ದೇವರು ಕೊಟ್ಟಿದ್ದು, ದೇವರೇ ಕಾಪಾಡುತ್ತಾನೆ ಎಂದರು.

ಭಾಗಮಂಡಲ, ತ್ರಿವೇಣಿ ಸಂಗಮಕ್ಕೆ ಆಗಮಿಸಿ ಭಂಗಂಡೇಶ್ವರ ದೇವರಿಗೆ ಸೇವೆ ಸಲ್ಲಿಸಿ ನಂತರ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅವರ ಜೊತೆ ಪತ್ನಿ ಅನಿತಾ ಕುಮಾರಸ್ವಾಮಿ, ಸಚಿವರಾದ ಡಿ ಕೆ ಶಿವಕುಮಾರ್, ಸಾ.ರಾ. ಮಹೇಶ್ ಕೂಡ ಇದ್ದರು. ಕೊಡಗು ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕಾವೇರಿ ನದಿಯ ನಾಲ್ಕು ಜಲಾಶಯಗಳು ಭರ್ತಿಯಾಗಿದ್ದು ಬಾಗಿನ ಸಲ್ಲಿಸಲು ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡಿದರು.

ಚಾಮರಾಜನಗರಕ್ಕೆ ಕಾಲಿಟ್ಟರೆ ಮುಖ್ಯಮಂತ್ರಿಗಳ ಅಧಿಕಾರ ಹೋಗುತ್ತದೆ ಎಂಬ ನಂಬಿಕೆಯಿದ್ದಂತೆ ತಲಕಾವೇರಿಗೆ ಭೇಟಿ ನೀಡಿದರೆ ಕೂಡ ಮುಖ್ಯಮಂತ್ರಿಗಳು ಶೀಘ್ರವೇ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಹಿಂದಿನಿಂದಲೂ ಇದೆ. ಈ ಹಿಂದೆ ತಲಕಾವೇರಿಗೆ ಭೇಟಿ ನೀಡಿದ್ದ ಜೆ ಎಚ್ ಪಟೇಲ್ ಅಧಿಕಾರ ಕಳೆದುಕೊಂಡಿದ್ದರು. ಅದಾದ ಬಳಿಕ 19 ವರ್ಷಗಳ ಕಾಲ ಯಾವೊಬ್ಬ ಮುಖ್ಯಮಂತ್ರಿಯೂ ಅಧಿಕಾರದಲ್ಲಿರುವಾಗ ತಲಕಾವೇರಿಗೆ ಹೋಗಿರಲಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಧರ್ಮವನ್ನು ಯಾರು ಕಾಪಾಡುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ . ಧರ್ಮ ಮತ್ತು ಸುಭಿಕ್ಷೆಯಿಂದ ರಾಜ್ಯವನ್ನು ನಡೆಸುವ ಕಾರ್ಯವನ್ನು ಸರಕಾರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ತಾಯಿಯ ಸನ್ನಿಧಾನಕ್ಕೆ ಬಂದು ಪೂಜೆ ಸಲ್ಲಿಸಲಾಗಿದೆ. ದುಃಖ ಹಾಗೂ ದಾರಿದ್ರ್ಯ ದೂರ ಮಾಡುವ ಶಕ್ತಿ ನೀಡುವಂತೆ ಚಾಮುಂಡಿ ಬಳಿ ಪ್ರಾರ್ಥನೆ ಮಾಡಲು ಮೈಸೂರಿಗೆ ಹೋಗುತ್ತಿದ್ದೇವೆ. ಹಾರಂಗಿ, ಕಬಿನಿ, ಕೆಆರ್ ಎಸ್ ಮೊದಲಾದ ಜಲಾಶಯಗಳ ಪೂಜೆ ಮಾಡುತ್ತಿದ್ದೇವೆ ಎಂದರು.
Talakaveri,CM H D Kumaraswamy,D K Shivakumar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ