ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

ಮೈಸೂರು, ಜು.20-ಮೊದಲ ಆಷಾಢ ಶುಕ್ರವಾರದ ನಿಮಿತ್ತ ಇಂದು ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಇಂದು ಮುಂಜಾನೆ 3 ಗಂಟೆಯಿಂದಲೇ ದೇವಾಲಯ ಸಮೀಪವಿರುವ ದೇವಿ ಕೆರೆಯಿಂದ ಜಲವನ್ನು ತಂದು ಚಾಮುಂಡೇಶ್ವರಿ ದೇವಿಗೆ ಮಹನ್ಯಾಸಪೂರ್ವ ರುದ್ರಾಭಿಷೇಕ, ಪಂಚಾಭಿಷೇಕದ ನಂತರ ವಿಶೇಷ ಅಲಂಕಾರ, ಕುಂಕುಮಾರ್ಚನೆ ಹಾಗೂ ಸಹಸ್ರನಾಮಾರ್ಚನೆ ಮಾಡಿ ಶೋಡೋಪಚಾರ ಪೂಜೆ ನೆರವೇರಿಸಲಾಯಿತು.
ಮುಂಜಾನೆ 5 ಗಂಟೆಯಿಂದ ದೇವಿಯ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
ಮೊದಲ ಆಷಾಢ ಶುಕ್ರವಾರದ ನಿಮಿತ್ತ ಇಂದು ದೇವಿಗೆ ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. 10 ಗಂಟೆಗೆ ದೇವಾಲಯದ ಆವರಣದಲ್ಲಿಯೇ ಪ್ರಾಕಾರೋತ್ಸವ ನೆರವೇರಿತು.
ಇಂದು ಮುಂಜಾನೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಕುಟುಂಬದೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿ ದರ್ಶನ ಪಡೆದು ಭಕ್ತಾದಿಗಳಿಗೆ ಕೆಲ ಸಮಯ ಪ್ರಸಾದ ವಿತರಿಸಿದರು.
ದೇವಿ ದರ್ಶನಕ್ಕಾಗಿ ಭಕ್ತಾದಿಗಳಿಗೆ ನಾಲ್ಕು ಸರತಿ ಸಾಲುಗಳ ವ್ಯವಸ್ಥೆ ಮಾಡಲಾಗಿತ್ತಲ್ಲದೆ, ಧರ್ಮದರ್ಶನ, 50 ರೂ.ಟಿಕೆಟ್, 200ರೂ. ಟಿಕೆಟ್ ಪಡೆದವರಿಗೆ ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಮಾಡಲಾಗಿತ್ತು.
ಗಣ್ಯರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಕಲ್ಪಿಸಿ ಎಲ್ಲಾ ಕಡೆ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿತ್ತು.
ಬೆಳಗಿನ ಜಾವ ಚುಮುಚುಮು ಚಳಿಯಲ್ಲಿ ಲಕ್ಷಾಂತರ ಮಂದಿ ಭಕ್ತರು 1001 ಮೆಟ್ಟಿಲುಗಳನ್ನು ಹತ್ತಿ ಬಂದು ಸರತಿ ಸಾಲಿನಲ್ಲಿ ದೇವಿ ದರ್ಶನ ಪಡೆದರು. ಹಾಗೆಯೇ ಹಲವಾರು ಮಂದಿ ಭಕ್ತರು ಪ್ರತಿ ಮೆಟ್ಟಿಲುಗಳಿಗೂ ಅರಿಶಿನ, ಕುಂಕುಮ ಹೂ ಇಟ್ಟು ಪೂಜೆ ಸಲ್ಲಿಸಿ ಮೆಟ್ಟಿಲು ಹತ್ತುತ್ತಿದ್ದುದು ಕಂಡುಬಂತು.
ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರಿಗಾಗಿ ಅಲ್ಲಲ್ಲಿ ಪುಳಿಯೋಗರೆ, ಲಾಡು, ಮಜ್ಜಿಗೆ ವಿತರಿಸುತ್ತಿದ್ದರು. ಭಕ್ತಾದಿಗಳ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದು, ಮೈಸೂರು ಸಮೀಪದ ರಜತ ಮಹಲ್ ಹೆಲಿಪ್ಯಾಡ್‍ನಲ್ಲಿ ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ಉಚಿತವಾಗಿ 50ಕ್ಕೂ ಹೆಚ್ಚು ಬಸ್‍ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಂಜಾನೆ 2 ಗಂಟೆಗೆ ಮೊದಲ ಬಸ್ ಆರಂಭವಾಗಿದ್ದು, ಆ ವೇಳೆಗಾಗಲೇ ನೂರಾರು ಭಕ್ತಾದಿಗಳು ಸಾಲಿನಲ್ಲಿ ನಿಂತಿದ್ದುದು ಕಂಡು ಬಂತು.
ಭಕ್ತರಿಗೆ ನಂದಿ ಬಳಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾಗೆಯೇ ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿ ದೇವಾಲಯದ ಕೌಂಟರ್‍ಗಳನ್ನು ತೆರೆಯಲಾಗಿದ್ದು, ಇಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ದೇವಿ ದರ್ಶನಕ್ಕೆ ಪ್ರವೇಶ ಟಿಕೆಟ್‍ಗಳನ್ನು ಸಹ ವಿತರಿಸಲಾಗುತ್ತಿದೆ.
ಅರಣ್ಯ ಸಿಬ್ಬಂದಿಗಳ ನೇಮಕ:
ಮೆಟ್ಟಿಲುಗಳನ್ನು ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳ ಸುರಕ್ಷತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ವಿಶೇಷ ಗಸ್ತು ಮಾಡುತ್ತಿದ್ದುದು ಕಂಡುಬಂತು. ಪೆÇಲೀಸ್ ಬಂದೋಬಸ್ತ್: ಬೆಟ್ಟದಾದ್ಯಂತ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ, ಸಿಸಿ ಟಿವಿಗಳನ್ನು ಅಳವಡಿಸಲಾಗಿತ್ತು. ಒಟ್ಟಾರೆ ಚಾಮುಂಡಿ ಬೆಟ್ಟದ ಸುತ್ತಲೂ ವಿಶೇಷ ಅಲಂಕಾರಮಾಡಿರುವುದು ಭಕ್ತರ ಗಮನ ಸೆಳೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ