ಮುಂಬೈ ಮಹಾಮಳೆ: ಸ್ಥಳೀಯ ರೈಲು ಸಂಚಾರ ಸ್ಥಗಿತ, ಕೆಲಸಕ್ಕೆ ರಜೆ ಹಾಕಿದ ಡಬ್ಬಾವಾಲಾಗಳು

ಮುಂಬೈ: ರಾತ್ರಿಯಿಡೀ ಸುರಿದ ಧಾರಾಕಾರ ಮಳಯಿಂದಾಗಿ ವಾಣಿಜ್ಯ ನಗರಿ ಮುಂಬೈಯಲ್ಲಿ ಪಶ್ಚಿಮ ರೈಲ್ವೆಯ ಉಪನಗರ ಸೇವೆ ಸ್ಥಗಿತಗೊಂಡಿದೆ.ಚರ್ಚ್ ಗೇಟ್ ಮತ್ತು ಬೊರಿವಿಲಿ ನಡುವೆ ರೈಲ್ವೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ವಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ರಾತ್ರಿಯಿಂದ ಮುಂಬೈ ನಗರ ಸುತ್ತಮುತ್ತ 200 ಮಿಲಿಮೀಟರ್ ಗೂ ಅಧಿಕ ಮಳೆ ಸುರಿದಿದ್ದು ರೈಲ್ವೆ ಹಳಿಗಳಲ್ಲಿ ನೀರು ನಿಂತುಕೊಂಡಿದೆ. ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ನೀರಿನ ಮಟ್ಟ ಕಡಿಮೆಯಾಗುವವರೆಗೆ ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ರೈಲ್ವೆ ಹಳಿಗಳಿಂದ ಪಂಪ್ ಮೂಲಕ ನೀರನ್ನು ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ಆದರೂ ಕೇಂದ್ರ ರೈಲ್ವೆ ಉಪನಗರ ಸೇವೆಗಳು ಕಳೆದ ರಾತ್ರಿಯಿಂದ ಎಂದಿನಂತೆ ಸಂಚರಿಸುತ್ತಿವೆ.ಕೇಂದ್ರ ರೈಲ್ವೆಯ ಎಲ್ಲಾ ಮೂರು ವಲಯಗಳಲ್ಲಿ ರೈಲುಗಳು ಎಂದಿನಂತೆ ಸಹಜವಾಗಿ ಸಂಚರಿಸುತ್ತಿವೆ ಎಂದು ಕೇಂದ್ರ ರೈಲ್ವೆ ವಲಯ ಟ್ವೀಟ್ ಮಾಡಿದೆ.ಕಳೆದ ಮೂರು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದರೂ ಕೂಡ ನಾವು ಅನಿಯಮಿತ ಸೇವೆ ಸಲ್ಲಿಸುತ್ತಿದ್ದೇವೆ. ರೈಲ್ವೆ ಸಂಚಾರದ ಬಗ್ಗೆ ಜನರಿಂದ ಹಲವು ಮೆಸೇಜ್ ಗಳು, ಟ್ವೀಟ್ ಗಳು ಬರುತ್ತಿವೆ. ಕೇಂದ್ರ ರೈಲ್ವೆ ವಲಯದ ಮೇಲೆ ಜನರು ಇಟ್ಟಿರುವ ನಂಬಿಕೆ, ವಿಶ್ವಾಸ, ಬೆಂಬಲದಿಂದ ನಾವು ಆಭಾರಿಯಾಗಿದ್ದೇವೆ ಎಂದು ಟ್ವೀಟ್ ಮಾಡಿದೆ.ಭಾರತೀಯ ಹವಾಮಾನ ಇಲಾಖೆ, ಮುಂದಿನ ಗುರುವಾರದವರೆಗೆ ಭಾರೀ ಮಳೆಯಾಗಬಹುದೆಂದು ಅಂದಾಜಿಸಿದೆ. ಸತತ ಮಳೆಯ ಕಾರಣದಿಂದ ಮುಂಬೈ ನಗರಕ್ಕೆ ನೀರೊದಗಿಸುವ ತುಲ್ಸಿ ಕೆರೆ ನಿನ್ನೆಯಿಂದ ತುಂಬಿ ಹರಿಯುತ್ತಿದೆ. ಮುಂಬೈಯಲ್ಲಿ ಜನಪ್ರಿಯವಾಗಿರುವ ಡಬ್ಬಾವಾಲಾಗಳು, ಟಿಫನ್ ಕ್ಯಾರಿಯರ್  ಸೇವೆ ಸಲ್ಲಿಸುವವರು ಭಾರೀ ಮಳೆಗೆ ಹೊರಹೋಗಲು ಸಾಧ್ಯವಾಗದೆ ತಮ್ಮ ಕೆಲಸಕ್ಕೆ ವಿರಾಮ ಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ