ದುಬೈ: ಇಂಗ್ಲೆಂಡ್ ತಂಡದ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಟೀಂ ಇಂಡಿಯಾ ಗೆದ್ದ ಬೆನ್ನಲ್ಲೇ ಐಸಿಸಿ ರ‍್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕೃತಗೊಳಿಸಿದ್ದು, ಸರಣಿ ಗೆದ್ದ ಭಾರತ ತಂಡ 2ನೇ ಸ್ಥಾನಕ್ಕೇರಿದೆ.
ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಒಟ್ಟು 124 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದ್ದು, 132 ಅಂಕಗಳನ್ನು ಹೊಂದಿರುವ ಪಾಕಿಸ್ತಾನ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇನ್ನು ಆಸ್ಟ್ಕೇಲಿಯಾ ತಂಡ 3 ಮತ್ತು ಇಂಗ್ಸೆಂಡ್ ತಂಡ 4ನೇ ಸ್ಥಾನಕ್ಕೆ ಕುಸಿದಿದೆ.
ಇನ್ನು ಬ್ಯಾಟ್ಸಮನ್ ಗಳ ರ‍್ಯಾಂಕಿಂಗ್ ಪಟ್ಟಿಕೂಡ ಪರಿಷ್ಕೃತಗೊಂಡಿದ್ದು, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದ ಹೀರೋ ಕೆಎಲ್ ರಾಹುಲ್ ವೃತ್ತಿ ಜೀವನದ ಶ್ರೇಷ್ಠ ಸ್ಥಾನ ಪಡೆದಿದ್ದಾರೆ. ರ‍್ಯಾಂಕಿಂಗ್ ನಲ್ಲಿ ರಾಹುಲ್ ಒಟ್ಟು 812 ಅಂಕಗಳೊಂದಿಗೆ 3ನೇ ಸ್ಥಾನಕ್ಕೇರಿದ್ದು, ಪಾಕಿಸ್ತಾನದ ಟಿ20 ಸೆನ್ಸೇಷನ್ ಫಖರ್ ಝಮಾನ್ 842 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್ ನ ಕೊಲಿನ್ ಮನ್ರೋ 801 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದು, ಭಾರತದ ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿ 11 ಮತ್ತು 12ನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ ಬೌಲಿಂಗ್ ನಲ್ಲಿ ಆಫ್ಘಾನಿಸ್ತಾನದ ರಷೀದ್ ಖಾನ್ ಅಗ್ರ ಸ್ಥಾನದಲ್ಲಿದ್ದು, ಭಾರತದ ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಾಹಲ್ 4ನೇ ಸ್ಥಾನದಲ್ಲಿದ್ದಾರೆ. ಇನ್ನು ಟಿ20 ಅಲ್ ರೌಂಡರ್ ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ಲೇಲಿಯಾದ ಗ್ಲೇನ್ ಮ್ಯಾಕ್ಸ್ ವೆಲ್ 366 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದು, ಆಫ್ಘಾನಿಸ್ತಾನದ ಮಹಮದ್ ನಬಿ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಭಾರತದ ಸುರೇಶ್ ರೈನಾ ಮತ್ತು ವಿರಾಟ್ ಕೊಹ್ಲಿ 13 ಮತ್ತು 14ನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ಗಳ ಅಗ್ರ 20ರ ಪಟ್ಟಿಯಲ್ಲಿ ಭಾರತ ತಂಡದ ಪರ ರೈನಾ ಮತ್ತು ಕೊಹ್ಲಿ ಮಾತ್ರ ಸ್ಥಾನ ಗಳಿಸಿರುವುದು ವಿಶೇಷವಾಗಿದೆ.