![download (6)](https://kannada.vartamitra.com/wp-content/uploads/2018/07/download-6-1-509x381.jpg)
ಬ್ರಿಸ್ಟೋಲ್, ಜು.9- ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲಲು ರೋಹಿತ್ ಶರ್ಮಾ ಅಂತಿಮ ಪಂದ್ಯದಲ್ಲಿ ತೋರಿದ ಅದ್ಭುತ ಸಾಧನೆಯೇ ಕಾರಣ ಎಂದು ಟೀಂ ಇಂಡಿಯಾದ ಯುವ ತಾರೆ ಹಾರ್ದಿಕ್ಪಾಂಡ್ಯಾ ಬಣ್ಣಿಸಿದ್ದಾರೆ. ರೋಹಿತ್ ಶರ್ಮಾ ಹಿಂದಿನ ಎರಡು ಪಂದ್ಯಗಳಲ್ಲಿ 32 ಹಾಗೂ 5 ರನ್ಗಳನ್ನು ಗಳಿಸಿದ್ದರು, ಆದರೆ ನಿರ್ಣಾಯಕ ಪಂದ್ಯದಲ್ಲಿ ಪರಿಸ್ಥಿತಿ ಅರಿತು ಬ್ಯಾಟಿಂಗ್ ಮಾಡಿ ಶತಕವನ್ನು ಗಳಿಸಿದ್ದೇ ಅಲ್ಲದೆ ತಂಡದ ಗೆಲುವಿಗೆ ಕಾರಣರಾದ ಅವರ ಬ್ಯಾಟಿಂಗ್ ಮಾಂತ್ರಿಕತೆ ತಲೆದೂಗಲೇಬೇಕು.
ಚುಟುಕು ಕ್ರಿಕೆಟ್ನ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 199 ಬೃಹತ್ ಮೊತ್ತವನ್ನು ಗುರಿ ಬೆನ್ನಟ್ಟಿದ ನಮ್ಮ ತಂಡ ಅಲ್ಪ ಮೊತ್ತಕ್ಕೆ ಧವನ್ ಹಾಗೂ ಕೆ.ಎಲ್.ರಾಹುಲ್ರನ್ನು ಕಳೆದುಕೊಂಡರೂ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಿದ ರೋಹಿತ್ ಹಾಗೂ ಕೊಹ್ಲಿ ಅವರು ಆಂಗ್ಲ ಕೈಯಿಂದ ಗೆಲುವನ್ನು ಕಸಿದುಕೊಂಡರು ಅಂತಿಮ ಕ್ಷಣದಲ್ಲಿ ನಾನು ಮಿಂಚಿ ತಂಡಕ್ಕೆ ನೆರವಾಗಿದ್ದು ಕೂಡ ಸಂತಸ ತಂದಿದೆ ಎಂದರು.
ಯಾವ ಕ್ರಮಾಂಕದಲ್ಲಿ ಆಡಲು ಸಿದ್ಧ:
ನಿನ್ನೆ ನಡೆದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ ಅನುಭವಿ ಆಟಗಾರರಾದ ಸುರೇಶ್ರೈನಾ, ಮಹೇಂದ್ರಸಿಂಗ್ರಂತಹ ಆಟಗಾರರಿದ್ದರೂ ಕೂಡ ನನ್ನನ್ನು ಮೇಲ್ಪಂಕ್ತಿಯಲ್ಲಿ ಆಡಲು ಕಳಿಸಿದ್ದರಿಂದ ಅದ್ಭುತ ಪ್ರದರ್ಶನ ತೋರಲು ಸಾಧ್ಯವಾಯಿತು.
ನಾನು ಚಿಕ್ಕ ವಯಸ್ಸಿನಲ್ಲಿ ಆಡುವಾಗ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ನಾನು ಕೇವಲ 13 ಚೆಂಡುಗಳಲ್ಲೇ 30 ರನ್ಗಳನ್ನು ಬಾರಿಸುವ ಸಮರ್ಥವನ್ನು ಹೊಂದಿದ್ದೇನೆ ಎಂದರು.
ಆಂಗ್ಲರ ವಿರುದ್ಧದ ನಿರ್ಣಾಯಕ ಪಂದ್ಯದ ಮೊದಲ ಓವರ್ನಲ್ಲೇ 22 ರನ್ಗಳನ್ನು ಬಿಟ್ಟುಕೊಟ್ಟು ದುಬಾರಿಯೆನಿಸಿದರೂ ಕೂಡ ನಾಯಕ ಕೊಹ್ಲಿ ನನ್ನ ಮೇಲೆ ನಂಬಿಕೆ ಇಟ್ಟು ಬೌಲಿಂಗ್ ಮಾಡಲು ಅವಕಾಶ ಕೊಟ್ಟಿದ್ದರಿಂದಲೇ 4 ವಿಕೆಟ್ಗಳನ್ನು ಕೆಡವಲು ಸಾಧ್ಯವಾಯಿತು.
ಕ್ರಿಕೆಟ್ ಜೀವನದಲ್ಲಿ ಗೆಲುವು ಹಾಗೂ ಸೋಲು ಎಂಬ ಎರಡು ಮೆಟ್ಟಿಲುಗಳು ಇರುತ್ತವೆ ಆದರೆ ನಾನು ಸದಾ ತಂಡದ ಗೆಲುವಿಗೆ ಶ್ರಮಿಸುತ್ತೇನೆ . ನಮ್ಮ ತಂಡಕ್ಕೆ ಉತ್ತಮ ನಾಯಕ ಹಾಗೂ ತರಬೇತುದಾರರ ತಂಡವಿದೆ ಎಂದು ಹಾರ್ದಿಕ್ ಪಾಂಡ್ಯಾ ಹೇಳಿದರು.
ಆಂಗ್ಲರ ನಾಡಿನಲ್ಲಿ ಅದ್ಭುತ ಪ್ರದರ್ಶನ ನೀಡಿ ಚುಟುಕು ಕ್ರಿಕೆಟ್ ಸರಣಿ ಗೆಲ್ಲುವ ಮೂಲಕ ಮುಂದಿನ ವಿಶ್ವಕಪ್ ಗೆಲ್ಲಲು ಭಾರತ ತಂಡ ಉತ್ತಮ ಅಡಿಪಾಯ ಹಾಕಿಕೊಂಡಿರುವುದು ಕ್ರೀಡಾ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.