ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕಿದೆ: ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ

ಬೆಂಗಳೂರು:ಜೂ-30: ಶಿಕ್ಷಣ ಪಡೆದವರಿಗೆ ಉದ್ಯೋಗ ಸಿಗುತ್ತಿಲ್ಲವಾದ್ದರಿಂದ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮಲ್ಲಿ ಇಷ್ಟೊಂದು ವಿಜ್ಞಾನ, ತಂತ್ರಜ್ಞಾನ ಇದೆ. ಆದರೂ ನಮ್ಮ ದೇಶದಲ್ಲಿ ಶೇ.25 ರಷ್ಟು ಜನ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಿದೆ. ನಾವೆಲ್ಲೋ ಉನ್ನತ ಶಿಕ್ಷಣ ಒದಗಿಸುವಲ್ಲಿ ವಿಫಲವಾಗಿದ್ದೇವೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕಿದೆ. ಸರ್ಕಾರಿ ಕಾಲೇಜುಗಿಂತ ಖಾಸಗಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಸರ್ಕಾರಿ ಕಾಲೇಜಿನ ಬೋಧಕರಿಗೆ ಹಚ್ಚಿನ ಸೌಲಭ್ಯವಿದೆ. ಆದರೂ ಯಾಕೆ ಉತ್ತಮ ಶಿಕ್ಷಣ ನೀಡಲಾಗುತ್ತಿಲ್ಲ ಎಂಬುದನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಪ್ರತಿಯೊಬ್ಬರು ಶಿಕ್ಷಣ ಕ್ಷೇತ್ರದಲ್ಲಿ ಸಿಕ್ಕಿರುವ ಗುರು ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಬೇಕಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉನ್ನತ ಶಿಕ್ಷಣ ದೊರೆಯುವಂತೆ ಮಾಡಬೇಕಿದೆ ಎಂದು ಸಲಹೆ ನೀಡಿದರು. ಹಾಗೇ ಬಜೆಟ್ ಸಭೆಯಲ್ಲಿ ಪ್ರಾಂಶುಪಾಲ ಹಾಗೂ ಉಪನ್ಯಾಸಕರ ಹುದ್ದೆ ಭರ್ತಿ ಹಾಗೂ 7 ನೇ ವೇತನ ಸ್ಕೇಲ್ ನೀಡಬೇಕೆಂದು ಸೂಚಿಸಿದ್ದೇನೆ ಎಂದು ತಿಳಿಸಿದರು.

ನನಗೂ ಬೆಳಗಾವಿಗೂ ನಂಟಿದೆ :

ವಿಟಿಯು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತೋಷ ತಂದಿದೆ. ನಾನು ಉನ್ನತ ಶಿಕ್ಷಣ ಸಚಿವನಾಗಿ ಅಧಿಕಾರ ಸ್ವೀಕರಿಸಿ ನಾಲ್ಕೈದು ದಿನವಾಗಿದೆ. ನಾನು ಸಹಕಾರ ಸಚಿವನಾಗಿದ್ದಾಗ ಬೆಳಗಾವಿಯಲ್ಲಿ ಸಹಕಾರಿ ಕಚೇರಿ ಕಟ್ಟಿಸಿದ್ದೇನೆ. ಹೀಗಾಗಿ ನನಗೂ ಬೆಳಗಾವಿಗೂ ನಂಟಿದೆ ಎಂದು ಹೇಳಿದರು.
GT Devegowda, Higher education for girls in rural areas,Visvesvaraya Technological University

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ