ಈಗಲ್ ಸೆಲೆಬ್ರೇಷನ್: ದಂಡಕ್ಕೆ ತುತ್ತಾಗಿರುವ ಆಟಗಾರರ ಸಹಾಯಕ್ಕಾಗಿ ಬ್ಯಾಂಕ್ ಖಾತೆ ತೆರೆದ ಅಲ್ಬೇನಿಯಾ ಪ್ರಧಾನಿ!

ಮಾಸ್ಕೋ: ಫೀಫಾ ನಿಯಮ ಉಲ್ಲಂಘಿಸಿ ದಂಡಕ್ಕೆ ತುತ್ತಾಗಿರುವ ಸ್ವಿಟ್ಜರ್ಲೆಂಡ್ ತಂಡದ ಇಬ್ಬರು ಆಟಗಾರರ ದಂಡ ಮೊತ್ತ ಕಲೆ ಹಾಕಲು ಅಲ್ಬೇನಿಯಾ ಪ್ರಧಾನಿ ಹೊಸ ಬ್ಯಾಂಕ್ ಖಾತೆ ತೆರೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಸರ್ಬಿಯಾ ವಿರುದ್ದದ ಪಂದ್ಯದ ಗೆಲುವಿನ ನೆಪದಲ್ಲಿ ‘ಈಗಲ್ ಸೆಲೆಬ್ರೇಷನ್’ ಮಾಡಿದ್ದ ಸ್ವಿಟ್ಜರ್ಲೆಂಡ್ ತಂಡದ ಇಬ್ಬರು ಆಟಗಾರರಿಗೆ ಫೀಫಾ 10 ಸಾವಿರ ಸ್ವಿಸ್ ಫ್ರಾಂಕ್ಸ್ ದಂಡ ವಿಧಿಸಿತ್ತು. ಈ ದಂಡದ ಮೊತ್ತ ಪಾವತಿ ಮಾಡುವ ಸಲುವಾಗಿ ಅಲ್ಬೇನಿಯಾ ಪ್ರಧಾನಿ ಎದಿ ರಮ ತಮ್ಮ ಅಲ್ಬೇನಿಯಾದ ರೈಫೀಸೆನ್ ಬ್ಯಾಂಕ್ ನಲ್ಲಿ ಪ್ರತ್ಯೇಕ ಖಾತೆ ತೆರೆದಿದ್ದಾರೆ. ಈ ಖಾತೆಗೆ ತಮ್ಮ ದೇಶದ ಜನರು ಉದಾರ ದೇಣಿಗೆ ನೀಡುವ ಮೂಲಕ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ತಮ್ಮ ದೇಶದ ಪರ ನಿಂತ ಆಟಗಾರರಿಗೆ ನೆರವು ನೀಡುವಂತೆ ಘೋಷಿಸಿದ್ದಾರೆ.
ಅಲ್ಲದೆ ಬ್ಯಾಂಕ್ ಖಾತೆಗೆ ‘ಡೋಂಟ್ ಬಿ ಅಫ್ರೈಡ್ ಆಫ್ ದಿ ಈಗಲ್’ (ಹದ್ದಿನ ಕುರಿತು ಭಯ ಬೇಡ) ಎಂದು ಹೆಸರನ್ನಿಟ್ಟಿದ್ದಾರೆ.
ಸರ್ಬಿಯಾ ವಿರುದ್ಧದ ಗೆಲುವಿನ ವೇಳೆ ಸ್ವಿಟ್ಜರ್ಲೆಂಡ್ ಪರ ಆಡುತ್ತಿರುವ ತಮ್ಮ ದೇಶದ ಆಟಗಾರರಾದ ಗ್ರಾನಿಟ್ ಕ್ಸಾಕಾ, ಕ್ಸೆರ್ಡಾನ್ ಶಾಕಿರಿ ಮತ್ತು ಸ್ಟೀಫನ್ ಲಿಚ್‌ ಸ್ಟೀನರ್ ಈಗಲ್ ಸೆಲೆಬ್ರೇಷನ್ ಮಾಡಿ ವಿವಾದ ಸೃಷ್ಟಿ ಮಾಡಿದ್ದಷ್ಟೇ ಅಲ್ಲದೇ ಫೀಫಾ ಕೆಂಗಣ್ಣಿಗೆ ತುತ್ತಾಗಿದ್ದರು. ಕ್ರೀಡೆಯಲ್ಲಿ ಗೆಲುವಿನ ಸಂಭ್ರಮದ ವೇಳೆ ದೇಶದ, ಇಲ್ಲವೇ ವ್ಯಕ್ತಿಯ ಘನತೆಗೆ ಚ್ಯುತಿ ತರುವಂಥದ್ದು ಅಕ್ಷಮ್ಯ ಅಪರಾಧ. ಆದರೆ ಸರ್ಬಿಯಾವನ್ನು ಅಣಕಿಸುವಂತೆ ಆಟಗಾರರಾದ ಗ್ರಾನಿಟ್ ಕ್ಸಾಕಾ, ಕ್ಸೆರ್ಡಾನ್ ಶಾಕಿರಿ ಮತ್ತು ಸ್ಟೀಫನ್ ಲಿಚ್‌ ಸ್ಟೀನರ್ ವರ್ತನೆಗಾಗಿ ಫೀಫಾ ದಂಡ ವಿಧಿಸಿತ್ತು.
ಸೋಮವಾರ ನಡೆದ ವಿಚಾರಣೆಯಲ್ಲಿ ಈ ಮೂವರೂ ಆಟಗಾರರು ತಪ್ಪೊಪ್ಪಿಕೊಂಡಿದ್ದು, ಕ್ಸಾಕಾ ಮತ್ತು ಶಾಕಿರಿಗೆ ಫಿಫಾ ೧೦ ಸಾವಿರ ಸ್ವಿಸ್ ಫ್ರಾಂಕ್ಸ್ (೮,೭೦೦ ಯೂರೋ) ಇಲ್ಲವೇ ೧೦,೦೦೦ ಡಾಲರ್‌ (ಅಂದಾಜು ರೂ. ೬,೮೩,೧೫೦) ಮತ್ತು ಸ್ಟೀಫನ್‌ಗೆ ೫,೦೦೦ ಸ್ವಿಸ್ ಫ್ರಾಂಕ್ಸ್ ದಂಡ ವಿಧಿಸಿತ್ತು. ಈ ದಂಡದ ಮೊತ್ತ ಕಲೆಹಾಕಲು ಅಲ್ಬೇನಿಯಾ ಪ್ರಧಾನಿ ಈ ಬ್ಯಾಂಕ್ ಖಾತೆ ತೆರಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ