ಚಾಲಕನ ಸಮಯ ಪ್ರಜ್ಞೆ, ತಪ್ಪಿದ ಅನಾಹುತ…

ವಾಹನ ಚಾಲಕನ ಹಾಗೂ ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿ ಇಪ್ಪತ್ತೆರಡು ಶಾಲಾ ಮಕ್ಕಳು ಸುರಕ್ಷಿತವಾಗಿ ಪಾರಾದ ಘಟನೆ ಇಂದು ವಿಜಯಪುರ ನಗರದಲ್ಲಿ ನಡೆದಿದೆ. ಸೈನಿಕ ಶಾಲೆ ಒಳ ಆವರಣದಲ್ಲಿರುವ ವಿವಿಧ ದರ್ಜೆಯ ಸಿಬ್ಬಂದಿಗಳ ಸುಮಾರು ಇಪ್ಪತ್ತೆರಡು ಮಕ್ಕಳನ್ನ ಹೊತ್ತೊಯ್ಯುತ್ತಿದ್ದ ಬಿಳಿ‌ಬಣ್ಣದ ಓಮ್ನಿ ವ್ಯಾನಿನಲ್ಲಿ ಇದ್ದಕ್ಕಿದ್ದಂತೆ ಹೊಗೆ ಹಾಗೂ ನಂತರ ಬೆಂಕಿ ಕಾಣಿಸಿಕೊಂಡಿದೆ. ವಿಜಯಪುರ ನಗರದ ಸೈನಿಕ ಶಾಲೆ ಬಳಿ, ಗೋದಾವರಿ ಹೋಟೆಲ್ ಬಳಿ ಈ ಘಟನೆ ಇಂದು ಮಧ್ಯಾನ್ಹ ನಡೆದಿದೆ. ಕೂಡಲೇ ಜಾಗೃತಗೊಂಡ ಚಾಲಕ, ಸ್ಥಳೀಯರನ್ನ ಕೂಗಿ ಕರೆದಿದ್ದಾನೆ. ತತ್ ಕ್ಷಣ ಚಾಲಕ ಹಾಗೂ ಸ್ಥಳೀಯರು ಕಾರ್ಯಪ್ರವೃತ್ತರಾಗಿ ಧಾವಿಸಿದ ಕಾರಣ ವಾಹನದಲ್ಲಿದ್ದ ಎಲ್ಲ ಮಕ್ಕಳನ್ನ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಕಾಣಿಸಿಕೊಂಡಿದ್ದ ಬೆಂಕಿಯನ್ನ ಸಹ ಕೂಡಲೇ ನಂದಿಸಿ ಆಗಬಹುದಾಗಿದ್ದ ಭಾರೀ ಅನಾಹುತವನ್ನ ತಪ್ಪಿಸಲಾಗಿದೆ. ಗ್ಯಾಸ್ ಕಿಟ್ ಅಳವಡಿಸಲಾಗಿದ್ದ, ಬಿಳಿಬಣ್ಣದ ಓಮ್ನಿ ವ್ಯಾನ್ ಇದಾಗಿದ್ದು, ಯಾವ ಶಾಲೆಗೆ ಸೇರಿದ್ದೆಂದು ಫಲಕ ಸಹ ನಮೂದಿಸಿರಲಿಲ್ಲ. ಯಾವ ಶಾಲೆ, ಇಷ್ಟೆಲ್ಲಾ ಮಕ್ಕಳನ್ನ ಒಂದೇ ವಾಹನದಲ್ಲಿ ತುಂಬಿಸಿದ್ದೇಕೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲು ಚಾಲಕ ಸ್ಥಳದಲ್ಲಿ ತಡಬಡಾಯಿಸಿದ್ದಾನೆ. ಅಲ್ಲದೇ ಸ್ಥಳಕ್ಕಾಗಮಿಸಿದ್ದ ಪಾಲಕರಿಗೆ ಮಕ್ಕಳನ್ನ ಒಪ್ಪಿಸಿ ಕೂಡಲೇ ನಿರ್ಗಮಿಸಿದನೆಂದು ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ…

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ