ಕೊನೆಗೂ ಅರ್ಜೆಂಟೀನಾ ಕೈ ಹಿಡಿದ ಮೆಸ್ಸಿ; ನೈಜಿರಿಯಾ ವಿರುದ್ಧ 2-1 ಅಂತರದ ಗೆಲುವು

ಮಾಸ್ಕೋ: ಕಳೆದ ಬಾರಿಯ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ  ರನ್ನರ್ ಆಪ್ ಆಗಿ ಹಾಲಿ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇರಲು ಪರದಾಡುತ್ತಿದ್ದ ಅರ್ಜೆಂಟೀನಾ ತಂಡ ಕೊನೆಗೂ ಲಯ ಕಂಡುಕೊಂಡಿದ್ದು, ಮಾಡು ಇಲ್ಲವೇ ಮಡಿ ಎಂಬಂತಿದ್ದ ನೈಜಿರಿಯಾ ವಿರುದ್ಧದ ಪಂದ್ಯದಲ್ಲಿ 2-1 ಅಂತರದ ರೋಚಕ ಜಯ ಸಾಧಿಸಿದೆ.
ಅರ್ಜೆಂಟಿನಾ ತಂಡದ  ಸ್ಟಾರ್ ಆಟಗಾರ ಮೆಸ್ಸಿ ಹಾಗೂ ಮಾರ್ಕೋಸ್ ರೋಜೋ ಗಳಿಸಿದ ಗೋಲುಗಳು ಅರ್ಜೆಂಟೀನಾ ತಂಡ ಟೂರ್ನಿಯಲ್ಲಿ ಜೀವಂತವಾಗಿರುವಂತೆ ಮಾಡಿದೆ. ಪಂದ್ಯದ ಆರಂಭದಿಂದಲೇ ಈ ನಿರ್ಣಾಯಕ ಪಂದ್ಯದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡಿದ ಅರ್ಜೆಂಟೀನಾ ತಂಡದ ಆಕ್ರಮಣಕಾರಿ ಪ್ರದರ್ಶನ ತೋರಿತು. ಪ್ರಮುಖವಾಗಿ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಮೆಸ್ಸಿ ಈ ಪಂದ್ಯದ ಆರಂಭದಲ್ಲೇ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದರು.
ಪಂದ್ಯ ಆರಂಭವಾದ ಕೇವಲ 14ನೇ ನಿಮಿಷದಲ್ಲೇ ಮೆಸ್ಸಿ ನೈಜಿರಿಯಾ ಗೋಲ್ ಕೀಪರ್ ರನ್ನು ವಂಚಿಸಿ ಭರ್ಜರಿ ಗೋಲು ಗಳಿಸಿದರು. ಆ ಮೂಲಕ ಅರ್ಜೆಂಟೀನಾ ತಂಡದ ಗೆಲುವಿನ ಕನಸಿಗೆ ನೀರೆರದರು. ಈದಾದ ಬಳಿಕ ಸುಮಾರು 50 ನಿಮಿಷಗಳ ಕಾಲ ಉಭಯ ತಂಡಗಳು ಗೋಲ್ ಗಾಗಿ ಹರಸಾಹಸ ಪಟ್ಟವು. 51ನೇ ನಿಮಿಷದಲ್ಲಿ ಅರ್ಜೆಂಟಿನಾಗೆ ತಿರುಗೇಟು ನೀಡಿದ ನೈಜಿರಾಯ ತಂಡ ಪೆನಾಲ್ಟಿ ಕಿಕ್ ನಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತು. ಅರ್ಜೆಂಟೀನಾ ತಂಡದ ಆಟಗಾರರ ನಡುವಿನ ಸಮನ್ವಯದ ಕೊರತೆಯನ್ನು ಸಮರ್ಥವಾಗಿ ಬಳಿಸಿಕೊಂಡ ನೈಜಿರಿಯಾದ ವಿಕ್ಟರ್ ಮೋಸಸ್ 51 ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡ ಸಮಬಲ ಸಾಧಿಸುವಂತೆ ನೋಡಿಕೊಂಡರು.
ತಂಡ ಮಾಡಿಕೊಂಡ ಯಡವಟ್ಟಿನ ಪರಿಣಾಮ ನೈಜಿರಿಯಾಗೆ ರೆಫರಿ ಪೆನಾಲ್ಟಿ ಕಿಕ್ ಅವಕಾಶ ನೀಡಿದರು. ಈ ವೇಳೆ ಮೂಸಸ್ ಯಶಸ್ವಿಯಾಗಿ ಚೆಂಡನ್ನು ಗೋಲ್ ಪೋಸ್ಟ್ ನೊಳಗೆ ಸೇರಿಸಿದರು. ಬಳಿಕ ಅರ್ಜೆಂಟೀನಾ ತಂಡ ಆಕ್ರಮಣಕಾರಿ ಆಟ ಮುಂದುವರೆಸಿತಾದರೂ 85 ನಿಮಿಷಗಳ ವರೆಗೂ ಯಾವುದೇ ತಂಡ ಗೋಲ್ ಬಾರಿಸಲು ಸಾಧ್ಯವಾಗಲಿಲ್ಲ. ಆದರೆ 86ನೇ ನಿಮಿಷದಲ್ಲಿ ಸಹ ಆಟಗಾರ ನೀಡಿದ ಪಾಸ್ ಅನ್ನು ಸಮರ್ಥವಾಗಿ ಬಳಸಿಕೊಂಡ ಮಾರ್ಕೋಸ್ ರೋಜೋ ನೋಡ ನೋಡುತ್ತಿದ್ದಂತೆಯೇ ಚೆಂಡನ್ನು ಗೋಲ್ ಪೋಸ್ಟ್ ಗೆ ಸೇರಿಸಿದರು.
ಆ ಮೂಲಕ ಅರ್ಜೆಂಟೀನಾ ತಂಡ ನೈಜಿರಿಯಾ ವಿರುದ್ಧ 2-1 ಅಂತರದಲ್ಲಿ ರೋಚಕ ಜಯ ಸಾಧಿಸಿದ್ದು ಮಾತ್ರವಲ್ಲದೇ, ನಾಕೌಟ್ ಹಂತಕ್ಕೆ ಭರ್ಜರಿಯಾಗಿ ಲಗ್ಗೆ ಇಟ್ಟಿದೆ. ಇನ್ನು ಈ ಗೆಲುವು ಅರ್ಜೆಂಟೀನಾ ತಂಡ ಟೂರ್ನಿಯ ಮೊದಲ ಗೆಲುವು ಎನ್ನುವುದು ವಿಶೇಷ. ಇದಕ್ಕೂ ಮೊದಲು ಆಡಿದ್ದ 2 ಪಂದ್ಯಗಳಲ್ಲಿ ಅರ್ಜೆಂಟೀನಾ ತಂಡ 1 ಡ್ರಾ ಮತ್ತು 1 ಸೋಲು ಅನುಭವಿಸಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ