ನಾನು ನೋಡಿದ ಚಿತ್ರ – ಕುಮ್ಕಿ (ತಮಿಳು)

(VINAY DANTKAL)

ಗ್ರಾಮಕ್ಕೆ ಬಂದವರಿಗೆ ರಾಜವೈಭೋಗ. ಗ್ರಾಮದವರೆಲ್ಲ ಇವರನ್ನು ದೇವರಂತೆ ಕಾಣುತ್ತಾರೆ. ಈ ಸಂದರ್ಭದಲ್ಲೇ ಕಥಾನಾಯಕನಿಗೆ ನಿಜ ಸಂಗತಿ ತಿಳಿಯುತ್ತದೆ. ಆತ ಗ್ರಾಮಕ್ಕೆ ವಾಪಾಸಾಗಬೇಕೆಂದು ಹಟ ಹಿಡಿಯುತ್ತಾನೆ. ಇನ್ನೊಂದಿನ ಇರೋಣ ಪ್ಲೀಸ್.. ಇನ್ನೊಂದೇ ದಿನ… ಎಂದು ದಿನ ಸಾಗಹಾಕುವ ಮಾವ.. ಹೀಗಿದ್ದಾಗಲೇ ಆತನಿಗೆ ಕಥಾ ನಾಯಕಿ ಕಾಣಿಸಿಕೊಳ್ಳುತ್ತಾಳೆ. ಹಿತವಾಗಿ ಲವ್ವಾಗುತ್ತದೆ.

ಇದು ನಾನು ಇತ್ತೀಚೆಗೆ ನೋಡಿದ ಕುಂಕಿ ಎನ್ನುವ ತಮಿಳು ಚಿತ್ರದಲ್ಲಿ ಗಾಢವಾಗಿ ಕಾಡುವ ಸನ್ನಿವೇಶ.

ದಟ್ಟ ಕಾಡು, ಕಾಡಿನಲ್ಲಿ ವ್ಯವಸಾಯ ಮಾಡುವ ಗ್ರಾಮಸ್ತರು. ಅವರಿಗೆ ಆಗಾಗ ಬಂದು ಕಾಟ ಕೊಡುವ ಕಾಡಿನ ಆನೆ. ಕಾಡಿನ ಆನೆಗೆ ಬಲಿಯಾಗುತ್ತಿರುವ ಜನ.

ಇಷ್ಟಾದರೂ ಅರಣ್ಯ ಇಲಾಖೆಯ ಸಹಾಯವನ್ನು ಪಡೆಯದ ಸ್ವಾಭಿಮಾನಿ ಗ್ರಾಮಸ್ಥರು. ಅರಣ್ಯ ಅಧಿಕಾರಿಗೋ ಈ ಗ್ರಾಮದ ನಾಯಕನ ಮಗಳ (ಲಕ್ಷ್ಮೀ ಮೇನನ್) ಮೇಲೆ ಕಣ್ಣು. ನಾನಿಲ್ಲ ಅಂದ್ರೆ ಕಾಡಾನೆಗೆ ನೀವೆಲ್ಲ ಬಲಿಯಾಗ್ತೀರಾ ಹುಷಾರು.. ಎನ್ನುವ ಅರಣ್ಯಾಧಿಕಾರಿ, ನೀವ್ ಹೆಂಗ್ ಬದುಕ್ತೀರೋ ನಾನೂ ನೋಡ್ತಿನಿ ಅಂತ ಲೈಟಾಗಿ ಆವಾಜನ್ನೂ ಹಾಕುತ್ತಾನೆ.

ಕಾಡಾನೆಯ ಕಾಟಕ್ಕೆ ಪರಿಹಾರ ಹುಡುಕಬೇಕು ಎನ್ನುವಾಗ ಗ್ರಾಮದ ನಾಯಕನಿಗೆ ನಾಡಿನ ಆನೆಯನ್ನು ತರಿಸಿ, ಅದರಿಂದಾಗಿ ಕಾಡಿನ ಆನೆಯ ಹಾವಳಿ ಮಟ್ಟ ಹಾಕುವ ಸಲಹೆಯನ್ನೊಬ್ಬರು ನೀಡುತ್ತಾರೆ. ಅದಕ್ಕೆ ತಕ್ಕಂತೆ ನಾಯಕ ನಾಡಿನಿಂದ ಸಾಕಾನೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿ, ಮುಂದಾಗುತ್ತಾನೆ.

****

ಚಿತ್ರದ ನಾಯಕ (ವಿಕ್ರಂ ಪ್ರಭೂ) ನಗರದಲ್ಲಿ ಆನೆಯೊಂದರ ಮಾಲೀಕ. ಆತ ಸಣ್ಣಪುಟ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತ, ಸರ್ಕಸ್ ನಲ್ಲಿ ತೊಡಗಿಕೊಳ್ಳುತ್ತ ಆನೆಯ ಹೊಟ್ಟೆ ತುಂಬಿಸುವ ತನ್ಮೂಲಕ ಜೀವನ ಕಟ್ಟಿಕೊಳ್ಳುವ ಕಾರ್ಯದಲ್ಲಿ ನಿರತನಾಗಿರುತ್ತಾನೆ. ಆತನಿಗೊಬ್ಬ ಸೋದರ ಮಾವ. ದುಡ್ಡಿಗೆ ಹಾತೊರೆಯುವವನು. ಸುಳ್ಳು ಹೇಳಿ ವಿಕ್ರಂ ಪ್ರಭು ಹಾಗೂ ಆನೆಯನ್ನು ಕಾಡಿನ ಕಡೆಗೆ ಮುಖ ಮಾಡುವಂತೆ ಮಾಡುತ್ತಾನೆ. ಇದೇ ಸಂದರ್ಭದಲ್ಲಿ ನಾಡಿನಲ್ಲಿ ಹಸಿದ ಆನೆ ಕೆಲವು ಕಡೆ ಆಹಾರ ಕದ್ದು ತಿಂದು, ಎಲ್ಲರಿಂದ ಬೈಗುಳಕ್ಕೂ ಕಾರಣವಾಗಿರುತ್ತದೆ. ಆನೆಯನ್ನು ಊರುಬಿಡಿಸಬೇಕು ಎಂಬುದು ಎಲ್ಲರ ವಾದವಾಗಿ, ಅನಿವಾರ್ಯವಾಗಿ ಕಥಾನಾಯಕ ಕಾಡಿನ ನಡುವಿನ ಗ್ರಾಮದ ಕಡೆಗೆ ಮುಖ ಮಾಡುತ್ತಾನೆ.

ನಾಯಕಿಯ ಮೇಲೆ ಲವ್ವಾಗಿರುವ ಕಾರಣ ನಾಯಕ ಅಲ್ಲೇ ಇರಲು ಮುಂದಾಗುತ್ತಾನೆ. ಕೊನೆಗೊಂದು ದಿನ ಆಕೆಯ ಪ್ರಾಣ ರಕ್ಷಣೆ ಮಾಡುತ್ತಾನೆ. ಆಕೆಗೂ ಈತನ ಮೇಲೆ ಲವ್ವಾಗುತ್ತದೆ.

ಹೀಗಿದ್ದಾಗಲೇ ಗ್ರಾಮದ ಮುಖ್ಯಸ್ಥ ತನ್ನ ಮಗಳಿಗೆ ಗಂಡು ನಿಶ್ಚಯವಾಗಿದೆ, ತಮ್ಮೂರಿನ ಪಾಲಿಗೆ ದೇವರಾಗಿ ಬಂದ ನೀವೇ ಮುಂದು ನಿಂತು ಮದುವೆ ಮಾಡಿಸಬೇಕು ಎಂದು ಕಥಾನಾಯಕನ ಬಳಿ ಹೇಳಿದಾಗ ನಾಯಕನಿಗೆ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಪ್ರೀತಿಯ ಸುದ್ದಿಯನ್ನು ಅಪ್ಪನ ಬಳಿ ಹೇಳು ಎಂದು ದುಂಬಾಲು ಬೀಳುವ ನಾಯಕಿ…

ಇನ್ನೊಂದೇ ದಿನ ಇದ್ದು ನಾಡಾನೆಯಿಂದ ಕಾಡಾನೆಯನ್ನು ಹೆಡೆಮುರಿ ಕಟ್ಟೋಣ ಎನ್ನುವ ಮಾವ..

ನಿನ್ನನ್ನೇ ನಂಬಿದ್ದೇನೆ.. ನೀನೇ ದೇವರು… ನನ್ನ ಮಗಳ ಮದುವೆ ಮಾಡಿಸು ಮಾರಾಯಾ ಎನ್ನುವ ಗ್ರಾಮದ ಮುಖ್ಯಸ್ಥ…

ಈ ನಡುವೆ ಅರಣ್ಯಾಧಿಕಾರಿ ಬಂದು ನಾಯಕ-ನಾಯಕಿಯರ ಪ್ರೀತಿಯ ಕುರಿತು ಗ್ರಾಮದ ಮುಖ್ಯಸ್ಥನ ಬಳಿ ಬಂದು ಹೇಳಿದರೂ ನಂಬದ ಗ್ರಾಮಸ್ಥರು…

ಮುಂದೇನಾಗುತ್ತೆ?

ನಾಯಕನಿಗೆ ನಾಯಕಿ ಸಿಗ್ತಾಳಾ…? ನಾಡಾನೆಯಿಂದ ಕಾಡಾನೆ ಸಂಹಾರವಾಗುತ್ತಾ? ಕಥಾ ನಾಯಕ ನಾಡಿಗೆ ಮರಳಿ ಬರ್ತಾನಾ?

ಇದೆಲ್ಲಕ್ಕೂ ಉತ್ತರ ಚಿತ್ರದಲ್ಲಿ ಲಭ್ಯ..

*************

ಹೆಸರಾಂತ ನಟ ಪ್ರಭು ಗಣೇಶನ್ ಅವರ ಮಗನಾದರೂ ವಿಕ್ರಂ ಪ್ರಭು ಅಚ್ಚರಿಯ ನಟನೆ ನೀಡಲು ಯಶಸ್ವಿಯಾಗಿದ್ದಾರೆ. ಬೊಮ್ಮನ್ ಎಂಬ ಹೆಸರಿನ ಪಾತ್ರದಲ್ಲಿ ವಿಕ್ರಂ ಪ್ರಭು ಅದ್ಭುತವಾಗಿ ನಟಿಸಿದ್ದಾನೆ. ಅಲ್ಲಿ ಎಂಬ ಪಾತ್ರದಲ್ಲಿ ಕಥಾ ನಾಯಕಿ ಇಷ್ಟವಾಗುತ್ತಾಳೆ… ಗ್ರಾಮೀಣ ಹುಡುಗಿಯಾಗಿ ಆಕೆಯ ನಟನೆಗೆ ಫುಲ್ ಮಾರ್ಕ್ಸ್ ಕೊಡಬಹುದು. ಚಿತ್ರ ಮುಗಿದ ನಂತರವೂ ಆಕೆ ಕಾಡುವಲ್ಲಿ ಯಶಸ್ವಿಯಾಗುತ್ತಾಳೆ.

ಉಳಿದಂತೆ ನಾಯಕನ ಮಾವ, ಗ್ರಾಮ ಮುಖ್ಯಸ್ಥರ ಪಾತ್ರಧಾರಿಗಳು ಉತ್ತಮವಾಗಿ ನಟಿಸಿದ್ದಾರೆ.

ಕಥಾ ಹಂದರ ಬಹುತೇಕ ಕನ್ನಡದ ಮುಂಗಾರು ಮಳೆಯನ್ನು ಹೋಲುತ್ತದೆ. ಪಾತ್ರ, ಸಂದರ್ಭಗಳು ಬೇರೆ ಬೇರೆ. ಮೊಲದ ಬದಲು ಇಲ್ಲಿ ಆನೆ ಬಂದಿದೆ. ಹಸಿರು.. ಅಲ್ಲೂ ಇದೆ.. ಇಲ್ಲೂ ಇದೆ. ಆದರೆ ಮುಂಗಾರು ಮಳೆಯಂತಹ ಕ್ಲೈಮ್ಯಾಕ್ಸು… ಮಾತು ಇಲ್ಲಿಲ್ಲ.

ಅಂದಹಾಗೆ ಇಲ್ಲೂ ಮುಂಗಾರು ಮಳೆಯಂತೆಯೇ ಜೋಗದ ದೃಶ್ಯವಿದೆ. ಮುಂಗಾರು ಮಳೆಯಲ್ಲಿ ಕುಣಿದು ಕುಣಿದು ಬಾರೆ ಎಂದಿದ್ದ ಜೋಡಿ, ಇಲ್ಲಿ ಸೊಲ್ಲಿಟ್ಟಲೇ….. ಎನ್ನುವುದು ವಿಶೇಷ. ಮುಂಗಾರು ಮಳೆಗಿಂತ ಚನ್ನಾಗಿ ಜೋಗವನ್ನು ಸೆರೆ ಹಿಡಿಯಲಾಗಿದೆ.

ಮಳೆಗಾಲ, ಹಸಿರು, ಚಿಟ ಪಟ ಹನಿಗಳು, ಕಾಡಿನ ಪರಿಸರ, ಮನುಷ್ಯ-ಆನೆಯ ಒಡನಾಟ, ಕಾಡಾನೆಯ ರೌದ್ರ, ಹಣಕ್ಕಾಗಿನ ಹಪಹಪಿತನ… ಆಹಾ… ಚಿಕ್ಕ ಚಿಕ್ಕ ಅಂಶಗಳಿಗೂ ಹೆಚ್ಚಿನ ಮಹತ್ವ ಕೊಡಲಾಗಿದೆ. ಚಿತ್ರ ಖಂಡಿತವಾಗಿಯೂ ಇಷ್ಟವಾಗುತ್ತದೆ. ಆಧುನಿಕ ಕಾಲದಲ್ಲಿಯೂ ಇಂತಹದ್ದೊಂದು ಊರು ಇದೆಯಾ ಎನ್ನುವಂತಾಗುತ್ತದೆ.

ಬಾಲ್ಯದಲ್ಲಿ ಇಷ್ಟವಾದ ಮಾಳ.. ರಾತ್ರಿ ಕಾಡಿನಲ್ಲಿ ಗದ್ದೆಯನ್ನು ಕಾಯುವುದು,.. ಸೂಡಿ… ಇತ್ಯಾದಿಗಳು ನಮ್ಮ ಈಸ್ಟ್ ಮನ್ ಕಲರಿನ ಲೈಫಿಗೆ ಕರೆದೊಯ್ಯುತ್ತವೆ.

ತಮಿಳು ಹಾಗೂ ಮಲೆಯಾಳಿಗಳು ಉತ್ತಮ ಹಾಗೂ ವಿಭಿನ್ನ ಕಥೆಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಕುಂಕಿ ಕೂಡ ಅದಕ್ಕೆ ಹೊರತಾಗಿಲ್ಲ.

ಹತ್ತು ಹಾಡುಗಳ… ಹತ್ತಾರು ಪ್ರಶಸ್ತಿ ಪಡೆದಿರುವ ಈ ಚಿತ್ರವನ್ನು ನೀವೂ ನೋಡಿ… ಖಂಡಿತ ಖುಷಿ ನೀಡುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ