ಪ್ರಧಾನಿ ಮೋದಿ ಹತ್ಯೆಗೆ ಮಾವೋವಾದಿಗಳು ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಹರಡಿ ಅನುಕಂಪ ಗಿಟ್ಟಿಸಿ ಅದನ್ನು ಮತವಾಗಿ ಪರಿವರ್ತನೆ ಮಾಡಿಕೊಳ್ಳುವ ತಂತ್ರವನ್ನು ಬಿಜೆಪಿ ಹೆಣೆದಿದೆ: ಎನ್ ಸಿಪಿ ಮುಖಂಡ ಶರದ್ ಪವಾರ್

ಪುಣೆ:ಜೂ-11; ಪ್ರಧಾನಿ ಮೋದಿ ಹತ್ಯೆಗೆ ಮಾವೋವಾದಿಗಳು ಸಂಚು ರೂಪಿಸಿದ್ದಾರೆ ಎಂಬುದು ಕೇವಲ ಬಿಜೆಪಿಯ ಉಪಾಯವಾಗಿದ್ದು, ಇದು ಅನುಕಂಪದ ಆಧಾರದ ಮೇಲೆ ತನ್ನ ಮತ ಬ್ಯಾಂಕ್ ತುಂಬಿಸಿಕೊಳ್ಳಲು ಬಿಜೆಪಿ ನಡೆಸುತ್ತಿರುವ ತಂತ್ರ ಎಂದು ಎನ್ ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.

ಪುಣೆಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಹಲ್ಲಾಬೋಲ್ ಜಾಗೃತಿ ಅಭಿಯಾನವನ್ನು ಆರಂಭಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾವೋವಾದಿಗಳು ಕೊಲ್ಲಲು ಯತ್ನಿಸಿದ್ದಾರೆ ಎಂಬ ಸುದ್ದಿಯಿಂದ ಜನರ ಅನುಕಂಪ ಗಿಟ್ಟಿಸಿ ಅದನ್ನು ಮತವಾಗಿ ಪರಿವರ್ತನೆ ಮಾಡಿಕೊಳ್ಳುವದು ಬಿಜೆಪಿ ಸಂಚು ಎಂದರು.

ಯಾವುದೇ ಕಾರಣಕ್ಕೂ ಬಿಜೆಪಿ ಅನುಕಂಪದ ಸಂಚಿಗೆ ಜನರರು ಸಿಲುಕಬಾರದು ಎಂದು ಮನವಿ ಮಾಡಿದರು. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಕುರಿತಂತೆ ಸಂಚು ರೂಪಿಸಿದ್ದರೂ ಅದು ತೀರಾ ಗೌಪ್ಯ ವಿಚಾರ. ಯಾವುದೇ ಕಾರಣಕ್ಕೂ ಅದು ಮಾಧ್ಯಮಗಳಲ್ಲಿ ಪ್ರಸಾರವಾಗಬಾರದು. ಹೀಗಿದ್ದೂ ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ ಎಂದರೆ ಇದರ ಹಿಂದೆ ಖಂಡಿತಾ ಕೇಂದ್ರ ಸರ್ಕಾರ ಅನುಕಂಪದ ಆಧಾರದಲ್ಲಿ ಮತ ಪಡೆಯುವ ಸಂಚಿದೆ ಎಂದು ಹೇಳಿದರು.

ಅಂತೆಯೇ ಪ್ರಗತಿಪರರನ್ನು ಮತ್ತು ವಿಚಾರವಾದಿಗಳನ್ನು ಕೇಂದ್ರ ಸರ್ಕಾರ ನಕ್ಸಲರು ಎಂಬಂತೆ ಬಿಂಬಿಸುತ್ತಿದೆ. ಎಲ್ಗಾರ್ ಪರಿಷದ್ ಆಯೋಜನೆ ಮಾಡಿದವರನ್ನು ಕೇಂದ್ರ ಸರ್ಕಾರ ನಕ್ಸಲ್ ಚಟುವಟಿಕೆ ಪ್ರಕರಣದಲ್ಲಿ ಬಂಧಿಸಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಯಾರ ಕೈವಾಡವಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಮಾಯಕರನ್ನು ಬಂಧಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
NCP chief Sharad Pawar,PM Modi,threat letter,BJP used to win people’s sympathy

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ