ಪ್ಲಾಸ್ಟಿಕ್ ಮಾಲಿನ್ಯತೆ ಹೊಡೆದಟ್ಟಿ – ಪ್ರಕೃತಿಯೇ ಆರಾಧ್ಯ ದೈವ

ಹಿಂದಿನಿಂದ ನಮ್ಮ ಪೂರ್ವಜರು ಪ್ರಕೃತಿಯನ್ನ ಅದರ ಅಂಗಗಳನ್ನ ದೈವವೆಂದು ಪೂಜಿಸಿ ರಕ್ಷಿಸುತ್ತಿದ್ದರು. ಆದರೆ ಅಭಿವೃದ್ಧಿಯ ಪಥದಲ್ಲಿ ಮನುಷ್ಯ ಮುಂದುವರೆದಂತೆ ಪ್ರಕೃತಿಯ ತೋಟದಲ್ಲಿ ಪ್ರಗತಿಯ ಸ್ಫೋಟವಾಗಿದೆ. ಸ್ವಾಭಾವಿಕ ಪ್ರಕೃತಿಗೂ, ಸ್ವಚ್ಛ ಪರಿಸರಕ್ಕೂ ಮಾನವ ಆರೋಗ್ಯಕ್ಕೂ ನೇರ ಕೊಂಡಿಯಿದೆ. ಹಾಗೆಯೇ ಇದರ ಮಾಲಿನ್ಯತೆ ಹಾಗೂ ಕಲುಷಿತ ತನಕ್ಕೂ ಅನಾರೋಗ್ಯಕ್ಕೂ ನೇರ ಸಂಬಂಧವಿದೆ. ಸರಕಾರ ಹಾಗೂ ಕೈಗಾರಿಕೆಗಳು ಅಭಿವೃದ್ಧಿಯ ಮಂತ್ರ ಜಪಿಸಿದರೆ, ಪರಿಸರವಾದಿಗಳು ಅಭಿವೃದ್ಧಿ ಪ್ರಕೃತಿಯ ಮೇಲೆ ಆಕ್ರಮಣ ಮಾಡಕೂಡದು ಎನ್ನುತ್ತಾರೆ. ಪ್ರತೀ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ. ಈ ವರ್ಷದ ಧ್ಯೇಯವಾಕ್ಯ ಪ್ಲಾಸ್ಟಿಕ್ ಮಾಲಿನ್ಯತೆ ಹೊಡೆದಟ್ಟಿ. ಈ ಹಿನ್ನೆಲೆಯಲ್ಲಿ ಈ ವರ್ಷ ಫೆಬ್ರವರಿ 19ರಂದು ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇಶದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಗಳ ಸಚಿವರಾದ ಡಾ. ಹರ್ಷವರ್ಧನ್ ಹಾಗೂ ವಿಶ್ವಸಂಸ್ಥೆಯ ಆಧೀನ ಮಹಾ ಕಾರ್ಯದರ್ಶಿ ಹಾಗೂ ವಿಶ್ವಸಂಸ್ಥೆಯ ಪರಿಸರ ವಿಭಾಗದ ಮುಖ್ಯಸ್ಥರಾದ ಎರಿಕ್ ಸೋಲ್‍ಹೈಮ್ ಜಂಟಿಯಾಗಿ ಘೋಷಿಸಿದಂತೆ, ಈ ವರ್ಷದ ವಿಶ್ವ ಪರಿಸರ ದಿನಾಚರಣೆಯಂದು ಇಡೀ ವಿಶ್ವದಾಚರಣೆಯ ಪ್ರಾಯೋಜಕತ್ವ ನಮ್ಮ ಭಾರತ ದೇಶದ್ದು.

ಇಡೀ ವಿಶ್ವ ಏಕ ಬಳಕೆಯ ಪ್ಲಾಸ್ಟಿಕ್ ಮಾಲಿನ್ಯತೆ ತಡೆಯಲು ಒಂದಾಗುತ್ತಲಿದೆ. ಒಂದು ಕ್ರಿಕೆಟ್ ಪಂದ್ಯದ ಒಂದು ಓವರ್‍ನಲ್ಲಿ ಹಾರ್ದಿಕ್ ಪಾಂಡ್ಯ ಮಾಡುವ ಬೌಲಿಂಗ್ ಸಮಯದಲ್ಲಿ, ಸಾಗರದಲ್ಲಿ 4 ಕಸದ ಲಾರಿಗಳಷ್ಟು ಪ್ಲಾಸ್ಟಿಕ್ ಎಸೆಯಲ್ಪಟ್ಟಿರುತ್ತದೆ. ಈ ವರ್ಷದ ಧ್ಯೇಯವಾಕ್ಯ, ಸರಕಾರಗಳು, ಕೈಗಾರಿಕೆಗಳು, ಸಮುದಾಯಗಳು ಹಾಗೂ ವ್ಯಕ್ತಿಗಳನ್ನ್ನು ಒಂದುಗೂಡಿಸಲು ಹಾಗೂ ಸುಸ್ಥಿರವಾದ ಬೇರೆ ಸಾಧ್ಯತೆಗಳನ್ನು ಅನ್ವೇಷಿಸಲು, ಸಾಗರಗಳ ಜೀವನ ನಾಶ ಮಾಡುತ್ತಿರುವ ಹಾಗೂ ಮಾನವ ಆರೋಗ್ಯವನ್ನು ಹೆದರಿಸುತ್ತಿರುವ, ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ ತಗ್ಗಿಸಲು, ಅತಿಯಾದ ಬಳಕೆ ನಿಲ್ಲಿಸಲು, ಪ್ಲಾಸ್ಟಿಕ್ ಮಾಲಿನ್ಯತೆ ಕಡಿಮೆ ಮಾಡಲು ಪ್ರೇರೇಪಿಸುತ್ತಿದೆ. ಭಾರತೀಯ ತತ್ವಶಾಸ್ತ್ರ ಹಾಗೂ ಜೀವನ ಶೈಲಿಯಲ್ಲಿ ಹಿಂದಿನಿಂದ ಬಂದಿರುವಂತೆ, ಪ್ರಕೃತಿಯೊಂದಿಗೆ ಸಹಜೀವನ ಎಂಬ ಬೇರಿದೆ. ಭೂಗೃಹವನ್ನು ಹೆಚ್ಚು ಸ್ವಚ್ಛಮಾಡಲು ಹಾಗೂ ಹಸಿರಾಗಿಡಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ. ಡಾ ಹರ್ಷವರ್ಧನ್. “ ಈ ಭೂಗೃಹದಲ್ಲಿರುವ ನಾವು ಪ್ರತಿಯೊಬ್ಬರೂ, ಪ್ರತಿದಿನ ಕನಿಷ್ಟ ಒಂದು ಹಸಿರು ಒಳ್ಳೆಯ ಕೆಲಸ ಮಾಡಿದರೆ, ಅದು ನಮ್ಮ ಸಾಮಾನಿಕ ಹಸಿರು ಜವಾಬ್ದಾರಿಯಾಗುತ್ತದೆ. ಇದರಿಂದ ಪ್ರತಿನಿತ್ಯ ಶತಕೋಟಿ ಒಳ್ಳೆಯ ಹಸಿರು ಕೆಲಸಗಳಾಗುತ್ತವೆ. ಸಾರ್ವಜನಿಕ ಆಸಕ್ತಿ ಹಾಗೂ ಭಾಗವಹಿಸುವಿಕೆಗಾಗಿ ವಿಶ್ವ ಪರಿಸರ ದಿನಾಚರಣೆ ಸಂಘಟಿಸಲು ಚಟುವಟಿಕೆಗಳು ಹಾಗೂ ಘಟನೆಗಳನ್ನು ಸಂಘಟಿಸಲು, ನಾವು ಬದ್ಧರಾಗಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ, ರಾಷ್ಟ್ರೀಯ ಅರಣ್ಯಗಳು ಹಾಗೂ ರಕ್ಷಿತ ಪ್ರದೇಶಗಳಲ್ಲಿ, ಕಡಲ ತಡಿಗಳಲ್ಲಿ, ಪ್ಲಾಸ್ಟಿಕ್ ಸ್ವಚ್ಛತಾ ಆಂದೋಳನ ಕಾರ್ಯಕ್ರಮಗಳು ಇತರರಿಗೆ ಉದಾಹರಣೆಯಾಗಿ ನಿಲ್ಲುವಂತೆ ನಮ್ಮ ಭಾರತ ಪ್ರೇರಣಾತ್ಮಕವಾಗಿ ಕಾರ್ಯ ಮಾಡಲಿದೆ”. ಎರಿಕ್ ಸೋಲ್‍ಹೈಮ್ ಅಂದು ಮಾತನಾಡಿದಂತೆ “ಈ ದೇಶ ಹವಾಮಾನ ಬದಲಾವಣೆಯಲ್ಲಿ ವಿಶ್ವ ನಾಯಕತ್ವ ಸಿದ್ಧ ಮಾಡಿ ತೋರಿಸಿದೆ, ಪ್ಲಾಸ್ಟಿಕ್ ಮಾಲಿನ್ಯತೆ ದೂರ ಮಾಡುವಲ್ಲಿ ಭಾರತ ಮಹಾಕ್ರಿಯೆಗೆ ವೇಗ ತರಲಿದೆ ಸದ್ಯ ವಿಶ್ವದಲ್ಲಿ ತುರ್ತುಸ್ಥಿತಿಯಿದ್ದು ನಾವು ಕುಡಿಯುವ ನೀರಿನಲ್ಲಿ, ತಿನ್ನುವ ಆಹಾರದಲ್ಲಿ ಪ್ಲಾಸ್ಟಿಕ್ ಇದೆ”.

ಪ್ರತೀವರ್ಷ ಪ್ರಪಂಚ 500 ಶತಕೋಟಿ ಪ್ಲಾಸ್ಟಿಕ್ ಬ್ಯಾಗ್ ಬಳಸುತ್ತದೆ. ಸಾಗರಗಳಲ್ಲಿ ಕನಿಷ್ಠ 8 ದಶಲಕ್ಷ ಜನ ಪ್ಲಾಸ್ಟಿಕ್ ಶೇಖರಣೆಯಾಗುತ್ತಿದೆ. ಪ್ರತಿ ನಿಮಿಷ ಒಂದು ಲಾರಿ ಕೊಳಚೆಗೆ ಇದು ಸಮ. ಇಡೀ ಶತಮಾನಕ್ಕಿಂತ ಕಳೆದ ದಶಕದಲ್ಲಿ ಹೆಚ್ಚು ಪ್ಲಾಸ್ಟಿಕ್ ಉತ್ಪಾದಿಸಿದ್ದೇವೆ. ಪ್ರತಿ ನಿಮಿಷ 1 ದಶಲಕ್ಷ ಪ್ಲಾಸ್ಟಿಕ್ ಶೀಷೆಗಳನ್ನು ಕೊಳ್ಳುತ್ತೇವೆ. ನಾವು ಉತ್ಪಾದಿಸುವ ಎಲ್ಲ ತ್ಯಾಜ್ಯದ ಶೇಕಡಾ 10ರಷ್ಟು ಪ್ಲಾಸ್ಟಿಕ್ಕೇ ಇದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ಪ್ರಪಂಚ ಕನಸೇ!? ಎಂಬ ಪ್ರಶ್ನೆಗೆ ಉತ್ತರವಾಗಿ ಈ ಕೆಲವು ಉತ್ತಮ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಉತ್ತರ ಭಾರತದ ಹಿಮಾಲಯದ ಬಳಿ ಪಾನ್‍ಗಾಟ್ ಎಂಬ ದಟ್ಟ ಅರಣ್ಯದ ಪ್ರದೇಶದಲ್ಲಿ, ಸ್ವಚ್ಛ ಪರ್ವತದ ಗಾಳಿ ಇದ್ದು, 200 ಸ್ಥಳೀಯ ಹಕ್ಕಿಗಳ ತಳಿಗಳಿವೆ. ಪ್ರಪಂಚದ ಮೇಲೆ ಮೂಲೆಗಳಿಂದ ಹಕ್ಕಿ ಪ್ರಿಯ ನೋಡುಗರು, ಪ್ರಕೃತಿ ಪ್ರಿಯರು ಧಾವಿಸುತ್ತಿದ್ದಾರೆ. ಅತಿ ಹೆಚ್ಚು ಪ್ರವಾಸಿಗಳ ಆಗಮನ ವ್ಯಾಪಾರಸ್ಥರ ಚಿಕ್ಕ ಸೈನ್ಯವನ್ನೇ ಅಲ್ಲಿಗೆ ಸೆಳೆಯಿತು. ಪ್ಲಾಸ್ಟಿಕ್ ಬಾಟಲಿಗಳ ನೀರು, ಬಿಸ್ಕೇಟು, ಉಪ್ಪೇರಿ, ಪ್ಲಾಸ್ಟಿಕ್ ಸುತ್ತಿದ ಸೋಪುಗಳು ಮಾರಾಟವಾದವು. ಪ್ಲಾಸ್ಟಿಕ್ ಕಸ ನಿವಾರಣೆ ಕೆಲವೇ ತಿಂಗಳ ಹಿಂದಿನವರೆಗೆ ಅಸಾಧ್ಯವಾಗಿತ್ತು. ಸ್ಥಳೀಯ ಹಳ್ಳದಲ್ಲಿ ಎಸೆದ ಕಸ, ಸ್ಥಳೀಯ ನದಿ ಸೇರಿ ತೇಲುತ್ತಿತ್ತು. ಕಳೆದ ವರ್ಷ ಒಂದು ದಿನ ಸ್ಥಳೀಯ ವಸತಿಗೃಹ ಮಾಲಿಕ, ಮೋಹಿತ್ ಅಗ್ಗರ್‍ವಾಲಾ, ಚಿಂತನ ಎಂಬ ಲಾಭರಹಿತ ಸಂಸ್ಥೆಯೊಂದಿಗೆ ತ್ಯಾಜ್ಯ ನಿವಾರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡ. ಆ ಸ್ವಾಭಾವಿಕ ಸ್ವರ್ಗಕ್ಕೆ ಪ್ಲಾಸ್ಟಿಕ್‍ನಿಂದ ಮುಕ್ತಿ ಕೊಡಿಸಲು, ಎಲ್ಲ ವಸತಿಗೃಹಗಳ ಮಾಲಿಕರನ್ನು ಭೇಟಿಯಾದ. ಕಾಳಜಿ ಇರುವ ನಾಗರಿಕರು, ಶಾಲಾ ಮಕ್ಕಳ ಬೆಂಬಲದೊಂದಿಗೆ, ಇವರು ಪ್ಲಾಸ್ಟಿಕ್ ಕಸ ನಿವಾರಣೆಯಲ್ಲಿ ತೊಡಗಿದ್ದಾರೆ. ಹೋಟೆಲ್‍ಗಳಲ್ಲಿಯ ಆಹಾರ ತ್ಯಾಜ್ಯದಲ್ಲಿ, ಹಸಿಯನ್ನು ಗೊಬ್ಬರಕ್ಕೆ ಹಾಕುತ್ತ, ಅತಿಥಿಗಳಿಗೆ ಬಟ್ಟೆ, ಚೀಲಗಳು, ಮರುಬಳಕೆಯಾಗುವ ನೀರಿನ ಬಾಟಲಿ ಕೊಡುತ್ತಿದ್ದಾರೆ. ಮನೆಯ ಕಸ ನಿವಾರಣೆಗೆ ಮನೆಯವರಿಗೆ, ಹೊರಗಿನಿಂದ ಬರುವ ಅತಿಥಿಗಳಿಗೆ, ಪ್ಲಾಸ್ಟಿಕ್ ತರದಿರಲು ಹೇಳುತ್ತ, ಹಸಿತ್ಯಾಜ್ಯವನ್ನು ದನ ಕರುಗಳಿಗೆ ಹಾಕುತ್ತಿದ್ದಾರೆ. ಒಂದೇ ವರ್ಷದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿದೆ.

ಈ ಲೇಖನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ