ನೇಪಾಳದಲ್ಲಿ ಪ್ರಧಾನಿ ಮೋದಿ: ಜಾನಕಿ ದೇವಸ್ಥಾನಕ್ಕೆ ಭೇಟಿ; ಜನಕಪುರ-ಅಯೋಧ್ಯಾ ನಡುವಿನ ಬಸ್‌ ಸೇವೆಗೆ ಚಾಲನೆ

ಕಾಠ್ಮಂಡು :ಮೇ-11:

ಎರಡು ದಿನಗಳ ಕಾಲ ನೇಪಾಲ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಜನಕಪುರದಲ್ಲಿನ 20ನೇ ಶತಮಾನದ ಜಾನಕಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಜಾನಕಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೋದಿ, ಸೀತಾ- ರಾಮರಿಗೆ ನಡೆಸುವ ವಿಶೇಷ ಪೂಜೆ ಷೋಡಷೋಪಚಾರ ಪೂಜೆಯಲ್ಲಿ ಪಾಲ್ಗೊಂಡರು. ಸುಮಾರು 45 ನಿಮಿಷಗಳ ಕಾಲ ಪ್ರಧಾನಿ ಮೋದಿ ಜಾನಕಿ ದೇವಸ್ಥಾನದಲ್ಲಿದ್ದು, ವಿವಿಧ ಪೂಜೆ ಹಾಗೂ ಭಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಜನಕಪುರ ಶ್ರೀರಾಮನ ಪತ್ನಿ ಸೀತಾ ಮಾತೆಯ ಜನ್ಮಸ್ಥಳವಾಗಿದೆ. ಈ ದೇವಾಲಯವನ್ನು ಸೀತಾಮೆಯ ಸ್ಮರಣಾರ್ಥವಾಇ 1910ರಲ್ಲಿ ನಿರ್ಮಾಣಮಾಡಲಾಗಿದೆ. ಜಾನಕಿ ದೇವಾಲಯವನ್ನು ಕಲ್ಲು ಮತ್ತು ಅಮೃತಶಿಲೆಗಳಿಂದ ನಿರ್ಮಿಸಲಾಗಿದ್ದು, ಮೂರು ಅಂತಸ್ತಿನ ರಚನೆಯನ್ನು ಹೊಂದಿದ್ದು, 50 ಮೀಟರ್ ಎತ್ತರ ಹಾಗೂ 4860 ಸ್ಕ್ವೇರ್ ಫೀಟ್ ವಿಸ್ತಾರವನ್ನು ಹೊಂದಿರುವ ದೇವಾಲಯವಾಗಿದೆ.

ಜಾನಕಿ ದೇವಾಲಯದ ಭೇಟಿ ಬಳಿಕ ಪ್ರಧಾನಿ ಮೋದಿ, ಜನಕಪುರ – ಅಯೋಧ್ಯಾ ನಡುವಿನ ಬಸ್‌ ಸೇವೆಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ, ಮಾತಾ ಜಾನಕಿಯ ಜನ್ಮ ಸ್ಥಳಕ್ಕೆ ಭೇಟಿ ನೀಡಲು ಒದಗಿರುವ ಈ ಅವಕಾಶದಿಂದ ನಾನು ಧನ್ಯನಾಗಿದ್ದೇನೆ. ದೈವಸ್ವರೂಪಿ ಸೀತೆಯ ಜನ್ಮಸ್ಥಳಕ್ಕೆ ಭೇಟಿನೀಡಿ ಪ್ರಾರ್ಥಿಸಬೇಕು ಎಂಬುದು ನನ್ನ ಬಹುದಿನಗಳ ಬೇಡಿಕೆಯಾಗಿತ್ತು. ಇಂದು ಆ ಅವಕಾಶ ಕೂಡಿ ಬಂದಿರುವುದಕ್ಕೆ ನನಗೆ ಸಂತಸವಾಗಿದೆ ಎಂದರು.

ಭಾರತ ಮತ್ತು ನೇಪಾಳದ ಜನರು ಪರಸ್ಪರ ಗೌರವ ಭಾವ ಹೊಂದಿದ್ದಾರೆ. ನೇಪಾಳ ಹಲವಾರು ದಶಕಗಳಿಂದ ಅಧ್ಯಾತ್ಮದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಈ ದೇಶದ ಹೊರತು, ಭಾರತದ ನಂಬಿಕೆಗಳು ಅಪೂರ್ಣವಾಗಲಿವೆ ಎಂದು ಹೇಳಿದರು.

ಭಾರತ ಮತ್ತು ನೇಪಾಲ ಉಭಯ ದೇಶಗಳ ನಡುವಿನ ರಾಮಾಯಣ ವರ್ತುಲವನ್ನು ನಿರ್ಮಿಸುವಲ್ಲಿ ಜತೆಗೂಡಿ ಶ್ರಮಿಸಬೇಕಾಗಿದೆ ಎಂದು ಹೇಳಿದ ಪ್ರಧಾನಿ, ಜನಕಪುರ ಹಾಗೂ ಅಯೋಧ್ಯೆ ನಡುವೆ ಸಂಪರ್ಕ ಏರ್ಪಟ್ಟಿದೆ. ಇದೊಂದು ಐತಿಹಾಸಿಕ ಕ್ಷಣ ಎಂದು ಹೇಳಿದ್ದಾರೆ. ರಾಮಾಯಣ ಸರ್ಕ್ಯೂಟ್ ನಲ್ಲಿ ಭಾರತ ಸರ್ಕಾರ ದೇಶದ 15 ಸ್ಥಳಗಳನ್ನು ಗುರ್ತಿಸಲಾಗಿದೆ. ಇದರಲ್ಲಿ ಉತ್ತರಪ್ರದೇಶದ ಅಯೋಧ್ಯೆ, ನಂದಿ ಗ್ರಾಮ್, ಶೃಂಗವೇರ್ ಪುರ ಮತ್ತು ಚಿತ್ರಕೂಟ, ಬಿಹಾರದ ಸೀತಾಮಡಿ, ಬಕ್ಸರ್ ಮತ್ತು ದರ್ಭಂಗಾ, ಮಧ್ಯಪ್ರದೇಶದ ಚಿತ್ರಕೂಟ, ಒಡಿಸಾದ ಮಹೇಂದ್ರ ಗಿರಿ, ಛತ್ತೀಸ್ಗಢದ ಜಗದಾಲ್ ಪುರ, ಮಹಾರಾಷ್ಟ್ರದ ನಾಶಿಕ್ ಮತ್ತು ನಾಗಪುರ, ತೆಲಂಗಾಣದ ಭದ್ರಾಚಲಮ್, ಹಾಗೂ ತಮಿಳುನಾಡಿನ ರಾಮೇಶ್ವರಂ, ಕರ್ನಾಟಕದ ಹಂಪಿ ರಾಮಾಯಣ ಸರ್ಕ್ಯೂಟ್ ನಲ್ಲಿವೆ ಎಂದು ಹೇಳಿದ್ದಾರೆ.

ನೇಪಾಲದ ಪ್ರಧಾನಿ ಕೆ ಪಿ ಶರ್ಮಾ ಓಲಿ ಅವರು ಪ್ರಧಾನಿ ಮೋದಿ ಅವರ ಜತೆಗಿದ್ದರು. ರಾಮಾಯಣ ವರ್ತುಲ ಯೋಜನೆಯನ್ನು ಭಾರತೀಯ ಪ್ರವಾಸೋದ್ಯಮ ಸಚಿವಾಲಯವು ಹಮ್ಮಿಕೊಂಡಿದ್ದು ಇದು ಭಾರತ – ನೇಪಾಲ ಧಾರ್ಮಿಕ ಪ್ರವಾಸೋದ್ಯಮಕ್ಕೆ ಇಂಬು ನೀಡಲಿದೆ.

ಪ್ರವಾಸದಲ್ಲಿ ಪ್ರಧಾನಿ ಮೋದಿ ನೇಪಾಲದ ಉನ್ನತ ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸಿ ದ್ವಿಪಕ್ಷೀಯ ಬಾಂಧವ್ಯಗಳನ್ನು ಮತ್ತಷ್ಟು ಸದೃಢಗೊಳಿಸಿ ಮೇಲ್ಮಟ್ಟಕ್ಕೆ ಒಯ್ಯುವ, ಉಭಯ ದೇಶಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದಾರೆ.

PM Modi,offers prayers, Janaki temple,flags-off janakpur-ayodhya bus service

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ