ವಿಧಾನಸಭಾ ಚುನಾವಣೆ: ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ; ಬೆಂಗಳೂರು ನಗರದಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ನೆ ಜಾರಿ

ಬೆಂಗಳೂರು:ಮೇ-೯: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಇರುವ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರ ಇಂದು ಸಂಜೆ 5ಕ್ಕೆ ಕೊನೆಯಾಗಲಿದೆ.

ಈ ಅವಧಿಯ ಬಳಿಕ ರಾಜಕೀಯ ನಾಯಕರು ತಮ್ಮ ಕ್ಷೇತ್ರ ಬಿಟ್ಟು ಹೊರಗಿನ ಪ್ರದೇಶಗಳಲ್ಲಿ ಮತ ಕೇಳುವಂತಿಲ್ಲ. ಅಭ್ಯರ್ಥಿಗಳನ್ನು ಬಿಟ್ಟು, ಮತದಾರರಲ್ಲದವರು ವಿಧಾನಸಭಾ ಕ್ಷೇತ್ರದಲ್ಲಿ ಇರುವಂತಿಲ್ಲ. ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಕೇಳಲು ಮಾತ್ರ ಅವಕಾಶ ಇರುತ್ತದೆ.

ವಿಧಾನಸಭಾ ಚುನಾವಣೆಗೆ ಮುಂಜಾಗ್ರತಾ ಕ್ರಮವಾಗಿ ಇಂದು ಸಂಜೆ 6 ಗಂಟೆಯಿಂದ ಮೇ 13ರ ಸಂಜೆ 6ರ ವರೆಗೆ ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್‌ ಕಮಿಷನರ್‌ ಟಿ.ಸುನಿಲ್‌ಕುಮಾರ್ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಗಡಗಳು ಮೆರವಣಿಗೆ ಹಾಗೂ ಪ್ರತಿಭಟನೆ ಮಾಡಬಾರದು. ಶಸ್ತ್ರ, ಕುಡುಗೋಲು, ಖಡ್ಗ, ಚೂರಿ, ಬಂದೂಕು ಹಾಗೂ ಸ್ಫೋಟಕ ವಸ್ತುಗಳನ್ನು ಸಾಗಾಟ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಮತದಾನದ ಹಿಂದಿನ 48 ಗಂಟೆಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹತ್ತು ಜನ ಮೀರದಂತೆ ಮನೆಮನೆಗೆ ಭೇಟಿ ನೀಡಿ, ಚುನಾವಣಾ ಪ್ರಚಾರ ಮಾಡಲು ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ.

ಶವ ಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ, ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಹೋಗುವವರಿಗೆ ಹಾಗೂ ಅನುಮತಿ ಪಡೆದ ಸಮಾರಂಭಗಳಿಗೆ ನಿಷೇಧಾಜ್ಞೆ ಅನ್ವಯಿಸುವುದಿಲ್ಲ ಎಂದು ಕಮಿಷನರ್‌ ಸ್ಪಷ್ಟಪಡಿಸಿದ್ದಾರೆ.

karnataka assembly election,public campaign bandh,144 Section Enforcement

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ