ಜನಸೇವೆಗೆ ನನಗೂ ಒಮ್ಮೆ ಅವಕಾಶ ಕೊಡಿ ಎಂದು ಬೀದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಮತದಾರರಲ್ಲಿ ಮನವಿ

ಬಿದರ್: ಮೇ. .08. ಹಾಲಿ ಶಾಸಕರಿಗೆ ಎರಡು ಬಾರಿ ಆಯ್ಕೆ ಮಾಡಿದ್ದೀರಿ. ಜನಸೇವೆಗೆ ನನಗೂ ಒಮ್ಮೆ ಅವಕಾಶ ಕೊಡಿ ಎಂದು ಬೀದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಮತದಾರರಲ್ಲಿ ಮನವಿ ಮಾಡಿದರು.
ಬೀದರ ನಗರದ ಗಾಂಧಿಗಂಜ್, ವಿದ್ಯಾನಗರ ಕಾಲೊನಿ ಮತ್ತಿತರ ಕಡೆಗಳಲ್ಲಿ ಮತಯಾಚಿಸಿ ಮಾತನಾಡುತ್ತಿದ್ದರು.
ಪಂಚಾಯಿತಿ ಸದಸ್ಯನಾಗದಿದ್ದರೂ ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಕೈಗೊಂಡಿದ್ದೇನೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಶಕ್ತಿಮೀರಿ ಪ್ರಯತ್ನಿಸಿದ್ದೇನೆ ಎಂದು ತಿಳಿಸಿದರು.

ಬೀದರ ನಗರದಲ್ಲಿ ಉದ್ಯೋಗ ಮೇಳ ಆಯೋಜಿಸಿ 2,400 ಜನ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿದ್ದೇನೆ. ಖಾಸಗಿ ಶಿಕ್ಷಕರ ಹೋರಾಟದ ನೇತೃತ್ವ ವಹಿಸಿ 2,200 ಖಾಸಗಿ ಶಿಕ್ಷಕರನ್ನು ಅನುದಾನಕ್ಕೆ ಒಳಪಡಿಸಿದ್ದೇನೆ. ಅತಿಕ್ರಮಣ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ನಗರದ ಉದ್ಯಾನ ಪ್ರದೇಶಗಳಲ್ಲಿ ಇದ್ದ 2,400 ಮನೆಗಳನ್ನು ಉಳಿಸಿದ್ದೇನೆ ಎಂದು ತಿಳಿಸಿದರು.
2,653 ಅಂಗವಿಕಲರಿಗೆ ಮನೆಗಳನ್ನು ಮಂಜೂರು ಮಾಡಿಸಿದ್ದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 108 ಮಂದಿರ, ಚರ್ಚ್‍ಗಳ ಜೀರ್ಣೋದ್ಧಾರಕ್ಕೆ ಅನುದಾನ ಮಂಜೂರು ಮಾಡಿಸಿದ್ದೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ನಡೆದ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದೆ. ವೈಯಕ್ತಿಕ ಖರ್ಚಿನಲ್ಲಿ ನೂರಾರು ಜನರನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದೆ ಎಂದು ಹೇಳಿದರು.

ಮತದಾರರು ಆಶೀರ್ವದಿಸಿದರೆ ಜನರಿಗೆ ಉಪಕಾರಿಯಾಗುವಂತಹ ಇನ್ನೂ ಹಲವಾರು ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಿದ್ದೇನೆ. ಬರ-ಗುಡಿಸಲು ಮುಕ್ತ ಬೀದರ ನಿರ್ಮಿಸಲು ಹಾಗೂ ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಯತ್ನಿಸಲಿದ್ದೇನೆ ಎಂದು ತಿಳಿಸಿದರು.
ಕೊಳಾರ ಕೈಗಾರಿಕಾ ಪ್ರದೇಶವನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಘೋಷಿಸುವುದು, ಎಲೆಕ್ಟ್ರಾನಿಕ್ಸ್ ಕ್ಲಸ್ಟರ್ ಸ್ಥಾಪಿಸುವುದು, ಚಿಲ್ಲರ್ಗಿ ಹಾಗೂ ಮಾಳೆಗಾಂವ್ ಹತ್ತಿರ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸುವುದು, ಬೀದರಿನಲ್ಲಿ ಮಹಿಳಾ ಎಂಜಿನಿಯರಿಂಗ್ ಕಾಲೇಜು ಆರಂಭಿಸುವುದು ನನ್ನ ಪ್ರಮುಖ ಆದ್ಯತೆಗಳು ಆಗಲಿವೆ ಎಂದು ಹೇಳಿದರು.

ಬೀದರ ನಗರದಲ್ಲಿ ನಡೆಯುತ್ತಿರುವ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವೆ. ನಗರದಲ್ಲಿ ಗುಣಮಟ್ಟದ ಅಂತರ ಸಂಪರ್ಕ ರಸ್ತೆಗಳನ್ನು ನಿರ್ಮಿಸಲು ಒತ್ತು ಕೊಡುವೆ ಎಂದು ತಿಳಿಸಿದರು.

ಗಾಂಧಿಗಂಜಿನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ, ಸೋಮಶೇಖರ ಪಾಟೀಲ್, ಅಶೋಕ ರೇಜಂತಲ್, ಪ್ರಭುರಾವ ವಸ್ಮತೆ, ಬಾಬುವಾಲಿ, ಜಯಕುಮಾರ ಕಾಂಗೆ ಮೊದಲಾದವರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ