ರಾಜ್ಯದ ಜನರು, ನನ್ನ ಹುಟ್ಟು ಹಬ್ಬದಂದು ಗೆಲುವಿನ ಗಿಫ್ಟ್ ನೀಡಲಿದ್ದಾರೆ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠಿ ಹೆಚ್ ಡಿ ದೇವೇಗೌಡ ವಿಶ್ವಾಸ

ಮೈಸೂರು:ಏ-29: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ದುರಾಡಳಿತವನ್ನು ನೋಡಿರುವ ರಾಜ್ಯದ ಜನರು, ನನ್ನ ಹುಟ್ಟು ಹಬ್ಬದಂದು ಗೆಲುವಿನ ಗಿಫ್ಟ್ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, 10 ವರ್ಷಗಳಿಂದ ರಾಜ್ಯದಲ್ಲಿ ಎರಡು ಪಕ್ಷಗಳ ಆಡಳಿತವನ್ನು ಜನ ನೋಡಿದ್ದಾರೆ. ಹಾಗಾಗಿ ಈ ಬಾರಿ ನಮಗೆ ಆಶೀರ್ವಾದ ಮಾಡಲಿದ್ದಾರೆ. ಬಿಎಸ್‌ಪಿ ಬಿಟ್ಟು ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿರು.

ಪ್ರಾದೇಶಿಕ ಪಕ್ಷದಿಂದ ಬೆಳೆದ ಸಿದ್ದರಾಮಯ್ಯ ಈಗ ನಮ್ಮ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಪ್ರಾದೇಶಿಕ ಪಕ್ಷ ಅನೇಕರನ್ನು ಬೆಳೆಸಿದೆ. ಆದರೆ ನಮ್ಮ ಪಕ್ಷವನ್ನೇ ಅನೇಕರು ದೂರುತ್ತಾರೆ ಎಂದು ಕಿಡಿಕಾರಿದರು.

ಅಂಬರೀಶ್ ಅವರನ್ನ ರಾಜಕೀಯಕ್ಕೆ ತಂದವನೇ ನಾನು. ಅವರು ಕಾವೇರಿ ಹೋರಾಟದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರು. ಅವರ ಬಗ್ಗೆ ಗೌರವವಿದೆ. ಸಿದ್ದರಾಮಯ್ಯನನ್ನು ಸಿದ್ದರಾಮು ಅಂತಾ ಕರಿತಿದ್ದೆ. ಆದರೀಗ ಅವರು ನಮ್ಮ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕುಮಾರಸ್ವಾಮಿ ವರ್ಚಸ್ಸಿನಿಂದ ಹತಾಶರಾಗಿ ನಮ್ಮನ್ನು ಮುಸ್ಲಿಂ ವಿರೋಧಿಗಳು ಅಂತಾ ಬಿಂಬಿಸಲಾಗ್ತಿದೆ ಎಂದು ಗೌಡರು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಚುನಾವಣಾ ಸಂದರ್ಭದಲ್ಲಿ ಐಟಿ ದಾಳಿ ವಿಚಾರ ಬಗ್ಗೆ ಮಾತನಾಡಿದ ದೇವೇಗೌಡರು, ಐಟಿ ದಾಳಿಗೂ ಚುನಾವಣೆಗೂ ಸಂಬಂಧ ಇಲ್ಲ. ಅವರ ಕೆಲಸ‌ ಅವರು ಮಾಡಲಿ ಬಿಡಿ ಎಂದರು.

ರಾಹುಲ್ ಗಾಂಧಿ ಪ್ರಧಾನಿ ಆಗೋದಾದ್ರೆ ಆಗಲಿ. ಅದನ್ನು ಈ ದೇಶದ ಜನ ತೀರ್ಮಾನ ಮಾಡ್ತಾರೆ. ದೇಶದ ಇತಿಹಾಸದಲ್ಲಿ ಪಕ್ಷದ ಅಧ್ಯಕ್ಷರು ಸೋತಿರುವ ಉದಾಹರಣೆಗಳಿವೆ. ಬಂಟ್ವಾಳದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಬೆದರಿಕೆಯೊಡ್ಡಿ ನಾಮಪತ್ರ ವಾಪಸ್ ತೆಗೆಯುವಂತೆ ಮಾಡಿದ್ದಾರೆ. ಈ ಸಂಬಂಧ ಎಸ್.ಪಿಗೆ ದೂರು ನೀಡುತ್ತೇನೆ ಎಂದು ಹೇಳಿದರು.

karnataka assembly election,H D Devegowda,mysore

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ