ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮುಂದುವರೆದ ವಾಗ್ದಾಳಿ

ಹಾಸನ:ಏ-28: ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕಡಿಮೆಯಾಗುತ್ತಿದ್ದು, ರಾಜ್ಯದ ಮೇಲೆ ಅವರ ಪ್ರಭಾವ ಬೀರದು ಎಂದು ಮಾಜಿ ಪ್ರಧಾನಿ ಜೆಡಿಎಸ್‌‌ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌‌ ಪ್ರಗತಿ ಸಹಿಸಲಾರದೇ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ ಎಂದರು.

ಇನ್ನು ಭಟ್ಕಳ ಜೆಡಿಎಸ್‌‌ ಅಭ್ಯರ್ಥಿ ಆಗಬೇಕಿದ್ದ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಅಪಹರಿಸಲಾಗಿತ್ತು. ಕಾಂಗ್ರೆಸ್‌‌ನವರು ಮುಸ್ಲಿಂರನ್ನು ದತ್ತು ತೆಗೆದುಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದ ಗೌಡರು ಕಾಂಗ್ರೆಸ್‌‌ನವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಲೋಕಾಯುಕ್ತ ತಂದವರು ನಾವು, ನಾಶ ಮಾಡಿದ್ದು ಕಾಂಗ್ರೆಸ್‌‌ ಎಂದು ಕಿಡಿಕಾರಿದ ದೇವೇಗೌಡ, ಅಧಿಕಾರದಲ್ಲಿದ್ದಾಗ ಏನೂ ಮಾಡದವರ ಪ್ರಣಾಳಿಕೆಯನ್ನು ಜನ ನಂಬುವುದಿಲ್ಲ. ನಾನೇ ಸಿಎಂ‌ ಅಂತ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಹೇಳಿಕೊಳ್ಳಲಿ. ತೀರ್ಮಾನ ಜನರ ಕೈಯಲ್ಲಿದೆ. ಮುಖ್ಯಮಂತ್ರಿ ಬಳಿ ಗುಪ್ತಚರ ವರದಿ ಇದೆ. ಅದರಂತೆ ಚಾಮುಂಡೇಶ್ವರಿ ಜೊತೆಗೆ ಬದಾಮಿಗೂ ಹೋಗಿರಬಹುದು. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌‌ ಶಕ್ತಿ ಏನೆಂಬುದು ತಿಳಿಯಲಿದೆ ಎಂದು ಹೇಳಿದರು.

ಕುಮಾರಸ್ವಾಮಿ, ರಾಜ್ಯದ 40 ಕಡೆ ನನ್ನ ಕಾರ್ಯಕ್ರಮ ನಿಗದಿ ಮಾಡಿದ್ದಾರೆ, ಅಲ್ಲಿಗೆ ಹೋಗುವೆ. ತವರು ಜಿಲ್ಲೆಯಲ್ಲಿ 2 ದಿನ ಪ್ರವಾಸ ಮಾಡುವೆ. ನಮ್ಮಲ್ಲಿ ಸ್ಟಾರ್‌‌ ಕ್ಯಾಂಪೇನರ್‌‌ ಇಲ್ಲ. ಪ್ರಜ್ವಲ್‌‌ಗೆ ಜಿಲ್ಲಾದ್ಯಂತ ಪ್ರಚಾರ ಮಾಡಿ, ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸು ಎಂದಿದ್ದೇನೆ. ಪ್ರಜ್ವಲ್‌‌‌ ಅವರನ್ನು ಯಾರೂ ನಿರ್ಲಕ್ಷ್ಯ ಮಾಡಲು ಆಗಲ್ಲ. ಅವನಿಗೆ ಅವನದ್ದೇ ಆದ ಶಕ್ತಿ‌ ಇದೆ. ಪ್ರಜ್ವಲ್‌‌‌ಗೆ ಅವಕಾಶ ಹುಡುಕಿಕೊಂಡು ಬರಲಿದೆ. ಯಾರ ಹಣೆಬರಹ ಯಾರೂ ತೆಗೆಯಲು ಆಗಲ್ಲ ಎಂದು ಮಾರ್ಮಿಕವಾಗಿ ನುಡಿದರು.

JDS,HD DeveGowda,Hasana

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ