ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ: ಓರ್ವ ಸಾವು

ಚಿಕ್ಕಬಳ್ಳಾಪುರ:ಚುನಾವಣಾ ಮತದಾನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನಲ್ಲಿ ರಕ್ತರಾಜಕೀಯ ಶುರುವಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಓರ್ವ ಜೆಡಿಎಸ್ ಕಾರ್ಯಕರ್ತ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಬಿದನೂರು ತಾಲ್ಲೂಕಿನ ಕೋಟಾಲದಿನ್ನೆಯ ಬಳಿ ನಡೆದಿದೆ.

ಗೌರಿಬಿದನೂರು ತಾಲ್ಲೂಕು ಹಳೇ ಉಪ್ಪಾರಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಎನ್ನಲಾದ ರೌಡಿಶೀಟರ್ ರಮೇಶ್ ಮತ್ತು ಜೆಡಿಎಸ್ ಕಾರ್ಯಕರ್ತರಾದ ರಾಮರೆಡ್ಡಿ, ನರೇಂದ್ರ ಮತ್ತಿತರ ನಡುವೆ ಜಗಳವಾಗಿದೆ. ಈ ವೇಳೆ ಮಾರಕಾಸ್ತ್ರಗಳಿಂದ ಬಂದಿದ್ದ ರೌಡಿಶೀಟರ್ ರಮೇಶ್ ಏಕಾಏಕಿ ದಾಳಿ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡ ರಾಮರೆಡ್ಡಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಇನ್ನೂ ನರೇಂದ್ರ ಸೇರಿದಂತೆ ಮೂವರಿಗೆ ತೀವ್ರ ಗಾಯಗಳಾಗಿದ್ದು, ನರೇಂದ್ರ ಸ್ಥಿತಿ ಗಂಭೀರವಾಗಿದ್ದು, ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಉದ್ರಿಕ್ತರಿಂದ ಪೊಲೀಸ್ ಜೀಪ್ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸ್ ಜೀಪ್ ಜಖಂ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ರಾಜಕಾರಣಿಗಳ ಹಿಡಿತಕ್ಕೊಳಗಾಗಿ ರೌಡಿಶೀಟರ್ ಗಳನ್ನ ಹದ್ದುಬಸ್ತಿನಲ್ಲಿಡಲು ಪೊಲೀಸರು ವಿಫಲವಾಗಿದ್ದಾರೆಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ