ಕೇಂದ್ರ ಅನುದಾನದ ಸದ್ವಿನಿಯೋಗದಿಂದ ಬೆಂಗಳೂರು ಸಮಗ್ರ ಅಭಿವೃದ್ಧಿ: ಶ್ರೀ ಅನಂತಕುಮಾರ್

ಬೆಂಗಳೂರು(ಏ.25):- 3ನೇ ಆವೃತ್ತಿಯ ‘ನವ ಬೆಂಗಳೂರಿನಿಂದ ನವ ಭಾರತ ನಿರ್ಮಾಣ‘ ಚರ್ಚೆ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀ ಅನಂತ ಕುಮಾರ್
ಅವರು ಬುಧವಾರ ವಿವಿಧ ವಲಯಗಳ ಸಾಮಾಜಿಕ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.

ರಾಜಧಾನಿಯಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಕಸ ವಿಲೇವಾರಿ, ಟ್ರಾಫಿಕ್ ಸಮಸ್ಯೆ, ಮೂಲಸೌಕರ್ಯಗಳ ಕೊರತೆ, ಕುಡಿಯುವ ನೀರು, ಪೊಲೀಸ್ ಇಲಾಖೆ ಸುಧಾರಣೆ, ಭ್ರಷ್ಟಾಚಾರ ಸೇರಿದಂತೆ ಅನೇಕ ವಿಷಯಗಳನ್ನು ನಾಗರಿಕ ಕಾರ್ಯಕರ್ತರು ಪ್ರಸ್ತಾಪಿಸಿ, ಅಗತ್ಯ ಸಲಹೆಗಳನ್ನು ನೀಡಿದರು.

ಜಲ ಸಾಕ್ಷರತೆ ಪ್ರತಿಷ್ಠಾನದ ಶ್ರೀ ಅಯ್ಯಪ್ಪ ಮಸಂಗಿ, ಬಯೋ ಮಿ ಸಲ್ಯುಷನ್ಸ್ ಸಂಸ್ಥೆಯ ಶ್ರೀ ಎಸ್.ವಿಶ್ವನಾಥ್, ನಮ್ಮ ಬೆಂಗಳೂರು ಪ್ರತಿಷ್ಠಾನದ ಶ್ರೀ ಶ್ರೀಧರ್ ಪಬ್ಬಿಶೆಟ್ಟಿ , ಹಸಿರು ದಳದ ಶ್ರೀಮತಿ ನಳಿನಿ ಶೇಖರ್, ಉದ್ಯಮಿ ಶ್ರೀ ಜಿ.ಎಂ.ಇನಾಂದಾರ್, ಉತ್ತಮ ರೈಲು ವ್ಯವಸ್ಥೆಗೆ ಹೋರಾಡುತ್ತಿರುವ ಶ್ರೀ ಸಂಜೀವ್ ದ್ಯಾಮನ್ನವರ್, ಅನನ್ಯ ಎನ್‍ಜಿಓ ಸಂಸ್ಥೆಯ ಶ್ರೀಮತಿ ಮಹಾಲಕ್ಷ್ಮಿ ಪಾರ್ಥಸಾರಥಿ, ವಕೀಲರಾದ ಶ್ರೀ ಎನ್ ಹರೀಶ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀ ಅನಂತ ಕುಮಾರ್ ಮಾತ ನಾಡಿ,`ನವ ಭಾರತ’ ನಿರ್ಮಾಣದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕನಸು ಈಡೇರಲು ಬೆಂಗಳೂರು ಅಭಿವೃದ್ಧಿ ಪ್ರಮುಖ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಗರದ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿ ಹೆಚ್ಚಿನ ಅನುಧಾನ ಮತ್ತು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಬೆಂಗಳೂರು ಹೆಮ್ಮೆಯ ನಗರವಾಗಬೇಕೆಂಬುದು ಕೇಂದ್ರ ಸರ್ಕಾರದ ಹೆಬ್ಬಯಕೆಯಾಗಿದ್ದರೂ, ಯೋಜನೆಗಳ ಜಾರಿಗೆ ಹಾಗೂ ಅನುದಾನ ಬಳಸಿಕೊಳ್ಳುವಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರ ಅಗತ್ಯ ಅನುದಾನ ನೀಡಲು ಸಿದ್ದವಿದ್ದರೂ ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಸುಧಾರಣೆ , ಮೂಲಸೌಕರ್ಯ ಅಭಿ ವೃದ್ಧಿ ಮತ್ತಿತರ ಯೋಜನೆಗಳಿಗೆ ಪ್ರಸ್ತಾವನೆಯನ್ನು ಕಳುಹಿಸಿಯೇ ಇಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯಕ್ಕೆ 79,000 ಕೋಟಿ ರೂ. ನೀಡಿತ್ತು. ಆದರೆ, ಶ್ರೀ ನರೇಂದ್ರಮೋದಿ ಅವರ ಸರ್ಕಾರ ಮೂರು ವರ್ಷಗಳಲ್ಲಿ ಇದಕ್ಕಿಂತ 3 ಪಟ್ಟು ಹೆಚ್ಚು ಅನುದಾನ ಒದಗಿಸಿದೆ. ಕಳೆದ ವರ್ಷ ಕೇಂದ್ರ ಸರ್ಕಾರ 20,000 ಕೋಟಿ ರೂ. ನೀಡಿದ್ದರೂ ರಾಜ್ಯ ಸರ್ಕಾರ 10 ಸಾವಿರ ಕೋಟಿ ರೂ. ವಿನಿಯೋಗ ಮಾಡಿಯೇ ಇಲ್ಲ ಎಂದರು.

ಬೆಂಗಳೂರಿನಲ್ಲಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಮೆಟ್ರೋ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ಜಾರಿಗೆ ತರುವಲ್ಲಿಯೂ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡಿದೆ. ಸುಮಾರು 17,000 ಕೋಟಿ ರೂ.ವೆಚ್ಚ ದಲ್ಲಿ ಸಬರ್ಬನ್‍ರೈಲು ಸೇವೆಯನ್ನು ಆರಂಭಿಸುತ್ತಿದೆ. ಪೊಲೀಸ್ ಇಲಾಖೆ ಸುಧಾರಣೆ, ಮೂಲಸೌಕರ್ಯ ಅಭಿ ವೃದ್ಧಿ ಮತ್ತಿತರ ಯೋಜನೆಗಳಿಗೆ ಕೇಂದ್ರ ಸರ್ಕಾರ ಎಷ್ಟೇ ಅನುದಾನ ಒದಗಿಸಲು ಸಿದ್ಧವಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಕೇಂದ್ರದೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಿ, ಅನುದಾನ ಸ ದ್ವಿನಿಯೋಗ ಮಾಡಲಿದೆ. ಈ ಮೂಲಕ ಸುರಕ್ಷಿತ ಹಾಗೂ ಸೌಕರ್ಯ, ಸೌಲಭ್ಯ ಭರಿತ ಬೆಂಗಳೂರು ನಿರ್ಮಿಸುವ ಸಂಕಲ್ಪವನ್ನು ಬಿಜೆಪಿ ಮಾಡಿದೆ. ಈ ಪ್ರಯತ್ನದಲ್ಲಿ ಸಾರ್ವಜನಿಕರ ಪಾತ್ರವು ಮುಖ್ಯವಾಗಿದೆ ಎಂದು ಶ್ರೀ ಅನಂತಕುಮಾರ್ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ