ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ ಸಾಧ್ಯತೆ

ಮುಳಬಾಗಿಲು:ಏ-25: ಮುಳಬಾಗಿಲು ಮೀಸಲು ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಾಸಕ ಜಿ. ಮಂಜುನಾಥ್​ ಅವರ ಜಾತಿ ಪ್ರಮಾಣ ಪತ್ರವನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ.

ಮಂಜುನಾಥ್ ಜಾತಿ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ಬುಧವಾರ ಮಹತ್ವದ ತೀರ್ಪು ನೀಡಿದ್ದು, ಮಂಜುನಾಥ್​ ಅವರ ಜಾತಿ ಪ್ರಮಾಣ ಪತ್ರವನ್ನು ಅಸಿಂಧುಗೊಳಿಸಿದೆ. ಹೀಗಾಗಿ ಅವರು ಈ ಚುನಾವಣೆಯಲ್ಲಿ ಸಲ್ಲಿಸಿರುವ ನಾಮಪತ್ರವೂ ತಿರಸ್ಕೃತಗೊಳ್ಳುವ ಸಾಧ್ಯತೆಗಳಿವೆ.

ಈ ಹಿಂದೆ ಮುಳಬಾಗಿಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೊತ್ತೂರು ಮಂಜುನಾಥ್​ ತಮ್ಮ ಉಮೇದುವಾರಿಕೆ ಸಲ್ಲಿಕೆ ವೇಳೆ, ತಾವು ಪರಿಶಿಷ್ಟ ಜಾತಿಗೆ ಸೇರಿದ ಬುಡುಗ ಜಂಗಮ ಜನಾಂಗಕ್ಕೆ ಸೇರಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದರು. ಅಲ್ಲದೆ, ಚುನಾವಣೆಯಲ್ಲಿ 73,146 ಮತ ಪಡೆದು ಗೆದ್ದು ಬಂದಿದ್ದರು.

ಆದರೆ, ಚುನಾವಣೆಗೆ ಸ್ಪರ್ಧಿಸುವ ವೇಳೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪರಾಭವಗೊಂಡಿದ್ದ ಜೆಡಿಎಸ್​ ಅಭ್ಯರ್ಥಿ ಎಂ. ಮುನಿಆಂಜಿನಪ್ಪ 2013ರಲ್ಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.

ಒಂದು ವೇಳೆ ಮಂಜುನಾಥ್​ ಅವರ ನಾಮಪತ್ರ ತಿರಸ್ಕೃತವಾದರೆ ಕಾಂಗ್ರೆಸ್​ ಚುನಾವಣೆಗೂ ಮೊದಲೇ ಒಂದು ಕ್ಷೇತ್ರವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.

Mulabagilu,Congress candidate, G. Manjunath, Caste Certificate,High Court ,invalid

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ