ಇನ್ಮುಂದೆ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ : ರೆಬೆಲ್ ಸ್ಟಾರ್ ಅಂಬರೀಶ್

ಬೆಂಗಳೂರು,ಏ.24: ನನಗೆ ಯಾವ ಬೇಸರವೂ ಇಲ್ಲ, ಅಂಬರೀಶ್ ಗೆ ಬೇಸರ ಆಗೋದೇ ಇಲ್ಲ. ಮಂಡ್ಯದ ಜನತೆಯ ಪ್ರೀತಿ, ಅಭಿಮಾನಕ್ಕೆ ಚಿರ ಋಣಿಯಾಗಿದ್ದೇನೆ ಎಂದು ಮಾಜಿ ಸಚಿವ ಅಂಬರೀಶ್ ತಿಳಿಸಿದ್ದಾರೆ.

ಮಂಡ್ಯ ಕ್ಷೇತ್ರದ ಕಣದಿಂದ ಹಿಂದೆ ಸರಿದ ಬಳಿಕ ಮಂಗಳವಾರ ಕಾಂಗ್ರೆಸ್ ಹೈಕಮಾಂಡ್ ರವಿ ಗಣಿಗ ಟಿಕೆಟ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಅಂಬರೀಶ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ನಿಂದ ಮೂಲೆ ಗುಂಪಾಗಿದ್ದೀರಾ ಎಂಬ ಪ್ರಶ್ನೆಗೆ ನಾನೇನೂ ಟಿಕೆಟ್ ಗೆ ಆಸೆ ಪಟ್ಟಿಲ್ಲ, ಪಟ್ಟಿದ್ದರೆ ಮೂಲೆ ಗುಂಪಾಗುತ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ. ಆಗ ನನ್ನ ವಿರೋಧಿಸಿದವರೆಲ್ಲಾ ಈಗ ಕಾಂಗ್ರೆಸ್ಸಿನಲ್ಲಿದ್ದಾರೆ. ಕೇಂದ್ರ, ರಾಜ್ಯ ಸಚಿವ ಸ್ಥಾನ ನೀಡಿದೆ. ಹೀಗಾಗಿ ಕಾಂಗ್ರೆಸ್ ಗೆ ದ್ರೋಹ ಬಗೆಯೋದಿಲ್ಲ ಎಂದರು.

ನನ್ನ ಆರೋಗ್ಯ ಚೆನ್ನಾಗಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಇನ್ಮುಂದೆ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇತ್ತೀಚೆಗೆ ನನಗೆ ಓಡಾಡಲು ಆಗ್ತಿಲ್ಲ ಎಂದು ಹೇಳಿದರು.

ಮಂಡ್ಯದಲ್ಲಿ ನಾನಿಲ್ಲ ಅಂದ್ರೆ ಇನ್ನೊಬ್ಬ ನಾಯಕ ಹುಟ್ಟುತ್ತಾನೆ. ಕಾಂಗ್ರೆಸ್ ಹೈಕಮಾಂಡ್ ಗೆ ಯಾವ ಹೆಸರನ್ನೂ ಸೂಚಿಸಿಲ್ಲ ನಾನು. ರಮ್ಯಾಗೂ ಟಿಕೆಟ್ ಕೊಡಬಹುದಿತ್ತು. ನಾನು ಎಲ್ಲವನ್ನೂ ಯೋಚಿಸಿಯೇ ನಿರ್ಧಾರ ಕೈಗೊಂಡಿದ್ದೇನೆ.

ನಾನು ಆಪ್ತರಿಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ. ಯಾಕೆಂದರೆ ಆಪ್ತರಿಗೆ ಕೊಡಿ ಎಂದ ಮೇಲೆ ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ನನ್ನ ಮೇಲಿರುತ್ತದೆ. ನಾನು ಯಾವುದೇ ಚುನಾವಣಾ ಪ್ರಚಾರಕ್ಕೆ ಹೋಗಲ್ಲ. ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತನಾಗುತ್ತಿದ್ದೇನೆ. ಮಂಡ್ಯ ಕ್ಷೇತ್ರದ ಟಿಕೆಟ್ ಯಾರಿಗೆ ಬೇಕಾದರೂ ಕೊಡಲಿ ಎಂದು ಅಂಬರೀಶ್ ತಿಳಿಸಿದರು.

ನನಗೇನೂ ಯಾವ ಆಸೆಯೂ ಇಲ್ಲ. ಕಳೆದ ಮೂರು ತಿಂಗಳಿನಿಂದ ನನಗೆ ಬೇರೆ, ಬೇರೆ ಪಕ್ಷದವರು ದುಂಬಾಲು ಬಿದ್ದಿದ್ದರು ಎಂದು ಅಂಬರೀಶ್ ಹೇಳಿದಾಗ, ಯಾವ ಪಕ್ಷದವರು ಎಂಬ ಪ್ರಶ್ನೆಗೆ ಎಲ್ಲಾ ಪಕ್ಷದವರು ಎಂದು ಜಾಣ್ಮೆಯ ಉತ್ತರ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏನ್ ಆಗುತ್ತೋ ಏನೋ..ಸಿದ್ದರಾಮಯ್ಯನವರು ಧೈರ್ಯದಿಂದ ಚುನಾವಣೆ ಎದುರಿಸಬೇಕು. ಸಿದ್ದರಾಮಯ್ಯ ಸಿಎಂ ಆಗಲು ನಾನೂ ಕಾರಣ. ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಬಾರದಿತ್ತು ಎಂದು ಅಂಬಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ