ಟಿಟಿಡಿ ಸದಸ್ಯೆಯಾಗಿ ತೆಲಗು ದೇಶಂ ಪಕ್ಷದ ಕ್ರೈಸ್ತ ಶಾಸಕಿ ನೇಮಕ: ವಿವಾದಕ್ಕೆ ಕಾರಣವಾದ ಹಿನ್ನಲೆಯಲ್ಲಿ ನೇಮಕಾತಿ ಹಿಂಪಡೆಯುವಂತೆ ಸಿಎಂ ನಾಯ್ಡುಗೆ ಅನಿತಾ ಮನವಿ

ಚಿತ್ತೂರ್‌ :ಏ-೨೩: ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ)ಯ ಸದಸ್ಯೆಯನ್ನಾಗಿ ತೆಲುಗು ದೇಶಂ ಪಕ್ಷದ ಕ್ರೈಸ್ತ ಶಾಸಕಿ ವಂಗಲಪುಡಿ ಅನಿತಾ ಅವರನ್ನು ನೇಮಕ ಮಾಡಲಾಗಿದೆ.

ತಾನೋರ್ವ ಹಿಂದು ಎಂದು ಹೇಳಿಕೊಂಡು ತನ್ನ ನೇಮಕಾತಿಯನ್ನು ಸಮರ್ಥಿಸಿಕೊಂಡಿರುವ ಹೊರತಾಗಿಯೂ ಅನಿತಾ ಅವರ ನೇಮಕಾತಿ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ತನ್ನ ನೇಮಕಾತಿಯನ್ನು ಹಿಂಪಡೆಯುವಂತೆ ಟಿಡಿಪಿ ಮುಖ್ಯಸ್ಥ ಮತ್ತು ಅಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿರುವ ಎನ್‌ ಚಂದ್ರಬಾಬು ನಾಯ್ಡು ಅವರನ್ನು ಕೋರಿದ್ದಾರೆ.

ನಾಯ್ಡು ಅವರಿಗೆ ಪತ್ರ ಬರೆದಿರುವ ಶಾಸಕಿ ಅನಿತಾ ಅವರು, ನನ್ನನ್ನು ಟಿಟಿಡಿ ಸದಸ್ಯೆಯನ್ನಾಗಿ ನೇಮಕ ಮಾಡಿರುವುದನ್ನು ಅನುಸರಿಸಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅದನ್ನೊಂದು ಅತ್ಯಂತ ಅಹಿತಕರ ಮತ್ತು ಜುಗುಪ್ಸೆಯ ವಿವಾದವನ್ನಾಗಿ ಮಾಡಿರುವುದು ನನಗೆ ತುಂಬಾ ನೋವುಂಟುಮಾಡಿದೆ. ನಾನೋರ್ವ ಹಿಂದು ಮತ್ತು ಪರಿಶಿಷ್ಠ ಜಾತಿಗೆ ಸೇರಿದವಳಾಗಿದ್ದೇನೆ ಎಂದು ಹೇಳಲು ಇಷ್ಟಪಡುತ್ತೇನೆ. ನನ್ನ ಈ ನೇಮಕಾತಿಯಿಂದ ಸರಕಾರಕ್ಕೆ ಇರಿಸು ಮುರಿಸಿನ ಸ್ಥಿತಿ ಒದಗುವುದನ್ನು ನಾನು ಇಷ್ಟಪಡುವುದಿಲ್ಲ. ಆದುದರಿಂದ ಟಿಟಿಡಿ ಮಂಡಳಿಯಲ್ಲಿನ ನನ್ನ ಸದಸ್ಯತ್ವವನ್ನು ಹಿಂಪಡೆಯುವಂತೆ ನಾನು ನಿಮ್ಮಲ್ಲಿ ಕೋರುತ್ತೇನೆ ಎಂದು ಅನಿತಾ ಅವರು ಪತ್ರದಲ್ಲಿ ಬರೆದಿದ್ದಾರೆ.

 

ಟಿಟಿಡಿ ಮಂಡಳಿಗೆ ಕ್ರೈಸ್ತರನ್ನು ನೇಮಕಮಾಡಿರುವುದು ಹಿಂದುಗಳಿಗೆ ಮಾಡಲಾಗಿರುವ ಅವಮಾನವಾಗಿದೆ ಎಂದು ಬಿಜೆಪಿ ಆಕ್ಷೇಪಿಸಿದೆ. ಬಿಜೆಪಿಯ ಯುವ ದಳವಾಗಿರುವ ಬಿಜೆವೈಎಂ, ಶಾಸಕಿ ಅನಿತಾ ಅವರನ್ನು ತತ್‌ಕ್ಷಣವೇ ಟಿಟಿಡಿ ಮಂಡಳಿ ಸದಸ್ಯತ್ವದಿಂದ ವಜಾ ಮಾಡುವಂತೆ ಆಗ್ರಹಿಸಿದೆ.

mla vangalapudi anitha,appointment in tirumala-tirupati-devasthanams board

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ