ಪಕ್ಷದಿಂದ ಉಚ್ಛಾಟನೆ ಹಿಂದೆ ಅಡಗಿದೆ ಷಡ್ಯಂತ್ರ: ಬಸವರಾಜ್ ಕಳಸ

ರಾಯಚೂರು-ಏ-೧೭: ನಾನು ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ, ಪಕ್ಷದಿಂದ ಉಚ್ಛಾಟನೆ ಹಿಂದೆ ಸ್ಥಳೀಯ ಮಟ್ಟದ ಷಡ್ಯಂತ್ರ ಅಡಗಿದೆ ಎಂದು ಬಿಜೆಪಿಯಿಂದ ಉಚ್ಛಾಟನೆಗೊಂಡ ಬಸವರಾಜ ಕಳಸ ಆರೋಪಿಸಿದ್ದಾರೆ.

ರಾಯಚೂರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದ ಮಾಜಿ ಶಾಸಕ ಶಿವರಾಜ್ ಪಾಟೀಲರಿಗೆ ಪಕ್ಷದ ಟಿಕೆಟ್ ಘೋಷಣೆಯನ್ನು ಹಿಂಪಡೆದು ಪಕ್ಷದ ಆಕಾಂಕ್ಷಿಗಳಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಏ.14 ರಂದು ಬೆಂಗಳೂರಿನ ಪಕ್ಷದ ಕಛೇರಿ ಮುಂದೆ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದು ಸತ್ಯ. ಪ್ರತಿಭಟನೆಯಲ್ಲಿ ಎಲ್ಲಯೂ ಪಕ್ಷ ವಿರೋಧಿ ಹೇಳಿಕೆಗಳು ಹಾಗೂ ಘೋಷಣೆಗಳನ್ನು ಹಾಕಿಲ್ಲ. ಆದರೆ, ಜಿಲ್ಲಾಧ್ಯಕ್ಷರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದಕ್ಕೆ ಉಚ್ಛಾಟನೆ ಮಾಡಲಾಗಿದೆ ಎಂದು ಮಾಧ್ಯಮ ಮಿತ್ರರಿಂದ ತಿಳಿದುಬಂದಿದ್ದು ಅಧಿಕೃತವಾಗಿ ಪತ್ರ ಬಂದ ನಂತರ ಶಿಸ್ತು ಸಮಿತಿ ಮುಂದೆ ಪ್ರಶ್ನಿಸಲಾಗುವುದು ಎಂದರು.

ಮಾಜಿ ಶಾಸಕ ಡಾ.ಶಿವರಾಜ್ ಪಾಟೀಲ್ ಪಕ್ಷ ಸೇರ್ಪಡೆಗೆ ನಾನು ಸೇರಿದಂತೆ 12 ಜನ ಆಕಾಂಕ್ಷಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದರೂ, ಅವರು ಶಾಸಕರಾಗಿದ್ದ ಸಮಯದಲ್ಲಿ ನಗರವನ್ನು ಅಭಿವೃದ್ಧಿ ಪಡಿಸದೇ ಜನರ ಆಕ್ರೋಶಕ್ಕೂ ಕಾರಣರಾಗಿದ್ದು, ಅಲ್ಲದೇ ಕಾಂಗ್ರೆಸ್ ಏಜೆಂಟ್‍ರಂತೆ ಕಾರ್ಯನಿರ್ವಹಿಸಿದ ಹಿನ್ನಲೆಯಲ್ಲಿ ನಾವು ವಿರೋಧಿಸಿದ್ದೆವು.

ಅವರ ವಿರುದ್ಧ ಹೋರಾಟದ ಭಾಗವಾಗಿ ರಾಯಚೂರು ಬಂದ್ ಕರೆ ನೀಡಿದ ಸಮಯದಲ್ಲಿ ಪಕ್ಷ ಸೇರ್ಪಡೆಗೊಂಡ ಹಿನ್ನಲೆಯಲ್ಲಿ ಪಕ್ಷದ ವರಿಷ್ಠರ ಮಾತಿಗೆ ಬೆಲೆಕೊಟ್ಟು ಬಂದ್ ಹಿಂಪಡೆಯುವ ಮೂಲಕ ಪಕ್ಷಕ್ಕೆ ಮುಜುಗರ ಉಂಟಾಯಿತು.

ಡಾ.ಶಿವರಾಜ್ ಪಾಟೀಲ್ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಣೆಯಾದಾಗಿನಿಂದಲೂ ನಾನು ವಿರೋಧಿಸುತ್ತಾ ಬಂದಿದ್ದು, ಈ ಕುರಿತು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರ ಗಮನಕ್ಕೂ ತಂದಿದ್ದು, ಶಿವರಾಜ್ ಪಾಟೀಲರ ಪರವಾಗಿ ಮತಯಾಚಿಸಲು ಪಕ್ಷದ ಕಾರ್ಯಕರ್ತರಿಗೆ ಮುಜುಗರ ಉಂಟಾಗುತ್ತಿದ್ದು, ಈ ಹಿನ್ನಲೆಯಲ್ಲಿ ಬಿ ಫಾರಂ ನೀಡುವವರೆಗೂ ಪಕ್ಷದ ಅಭ್ಯರ್ಥಿಯನ್ನು ಬದಲಾಯಿಸುವ ಅವಕಾಶವಿದ್ದು, ಈ ಹಿನ್ನಲೆಯಲ್ಲಿ ನಾನು ಹೋರಾಟ ಮಾಡಿದ್ದೇನೆ. ಎಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲವಾದರೂ ನನ್ನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ವಿವಿಧ ಕ್ಷೇತ್ರಗಳಾದ ಚಿತ್ರದುರ್ಗ ಜಿಲ್ಲೆಯ ಮೊಣಕಾಲೂರು, ವಿಜಯಪುರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡಾಯವೆದ್ದಿದ್ದರೂ ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೊದಲ ಬಲಿಪಶು ನಾನಾಗಿದ್ದು, ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷರೇ ನಮ್ಮ ಜಿಲ್ಲೆಯವರು ಆಗಿದ್ದರಿಂದ ಉಚ್ಛಾಟನೆಯ ಅಧಿಕೃತ ಪತ್ರ ದೊರೆತ ನಂತರ ಈ ಕುರಿತು ಪ್ರಶ್ನಿಸಲಾಗುವುದು ಎಂದರು.

ಪಕ್ಷ ವಿರೋಧಿ ಚಟುವಟಿಕೆಗೆ ಜಿಲ್ಲಾಧ್ಯಕ್ಷರು ನೀಡಿರುವ ಕಾರಣಗಳಲ್ಲಿ ಒಂದನ್ನಾದರೂ ಸಾಬೀತು ಪಡಿಸಿದ್ದಲ್ಲಿ 6 ವರ್ಷವಲ್ಲ ಜೀವನ ಪರಿಯಂತ ರಾಜಕೀಯದಿಂದ ದೂರ ಉಳಿಯುವೆ ಎಂದು ಹೇಳಿದರು.

Assembly election,BJP,Basavaraj kalasa,Raichur

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ