ಮಂಡ್ಯದಿಂದ ಅಂಬರೀಶ್ ಗೆ ಟಿಕೆಟ್; ಯುವಮುಖಂಡ ಪಿ ರವಿಕುಮಾರ್ ಗೌಡಗೆ ತಪ್ಪಿದ ಕಾಂಗ್ರೆಸ್ ಟಿಕೆಟ್: ಬೆಂಬಲಿಗರಿಂದ ಪ್ರತಿಭಟನೆ

ಮಂಡ್ಯ:ಏ.16: ಮಂಡ್ಯದಿಂದ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದು, ಯುವ ಮುಖಂಡ ಪಿ ರವಿಕುಮಾರ್ ಗೌಡ ಗಣಿಗ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿದೆ.

ಈ ಹಿನ್ನಲೆಯಲ್ಲಿ ಆಕ್ರೋಶಗೊಂಡಿರುವ ರವಿಕುಮಾರ್ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕಚೇರಿಯಲ್ಲಿ ನ ಕುರ್ಚಿಗಳನ್ನು ಒಡೆದು ಹಾಕಿ, ಕರಪತ್ರಗಳು ಹಾಗೂ ಬ್ಯಾನರ್‌ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಟಿಕೆಟ್‌ಗಾಗಿ ಅರ್ಜಿಯನ್ನೂ ಸಲ್ಲಿಸದ ಅಂಬರೀಷ್ ಅವರಿಗೆ ಪಕ್ಷ ಟಿಕೆಟ್ ಘೋಷಣೆ ಮಾಡಿದೆ. ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದ ರವಿಕುಮಾರ್‌ಗೌಡ ಅವರಿಗೆ ಟಿಕೆಟ್ ಕೈತಪ್ಪಿದೆ ಎಂದು ಬೆಂಬಲಿಗರು ದೂರಿದ್ದಾರೆ. ಅಲ್ಲದೇಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರವಿಕುಮಾರ್‌ ಬೆಂಬಲಿಗರು ಅರೆಬೆತ್ತಲೆ ಮೆರವಣಿಗೆ ನಡೆಸಿದರು.

ಮೆರವಣಿಗೆಯಲ್ಲೇ ನಗರದ ಬಂದೀಗೌಡ ಬಡಾವಣೆಯಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತೆರಳಿದರು. ಅಲ್ಲಿಗೆ ಹೋಗುತ್ತಿದ್ದಂತೆ ಉದ್ರಿಕ್ತಗೊಂಡ ಗುಂಪು ಕಚೇರಿಯಲ್ಲಿ ಕುರ್ಚಿಗಳನ್ನು ಒಡೆದುಹಾಕಿ ದಾಂಧಲೆ ನಡೆಸಿದೆ.

ಈ ನಡುವೆ ಬೆಂಬಲಿಗರ ಆಕ್ರೋಶ ಕಟ್ಟೆಯೊಡೆಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ರವಿಕುಮಾರ್ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಟಿಕೆಟ್ ಕೇಳುವುದು ನಮ್ಮ ಹಕ್ಕು. ಈ ಹಕ್ಕು ಪ್ರತಿಪಾದನೆ ಮಾರ್ಗವು ಪ್ರತಿಭಟನೆಯ ಸ್ವರೂಪ ಪಡೆಯುವುದು ಸಹಜ. ಆದರೆ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಉದ್ವೇಗಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ.
Assembly election, Mandya,Ravikumar gouda Ticket miss,Congress workers,protest

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ