ಕಾಮನ್ ವೆಲ್ತ್ ಕ್ರೀಡಾಕೂಟ-2018ಕ್ಕೆ ತೆರೆ: 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚಿನ ಪದಕ ಗೆದ್ದು ಮೂರನೇ ಸ್ಥಾನ ಪಡೆದ ಭಾರತ

ಗೋಲ್ಡ್​ಕೋಸ್ಟ್​ :ಏ-15: 21ನೇ ಕಾಮನ್​ವೆಲ್ತ್​ ಕ್ರೀಡಾಕೂಟ-2018ಕ್ಕೆ ತೆರೆಬಿದ್ದಿದ್ದು, ಭಾರತದ ಕ್ರೀಡಾಪಟುಗಳು ಒಟ್ಟು 66 ಪದಕಗಳನ್ನು ಗೆಲ್ಲುವ ಮೂಲಕ, ಪದಕ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ.

ಭಾರತ 26 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಮೂರನೆ ಸ್ಥಾನ ಬಾಚಿಕೊಂಡಿದೆ. ಕ್ರೀಡಾಕೂಟದಲ್ಲಿ ಆಷ್ಟ್ರೇಲಿಯಾ 80 ಚಿನ್ನದ ಪದಕ ಸೇರಿದಂತೆ ಒಟ್ಟು 197 ಪದಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದರೆ, ಇಂಗ್ಲೆಂಡ 45 ಚಿನ್ನ ಸೇರಿ ಒಟ್ಟು 136 ಪದಕಗಳೊಂದಿಗೆ ಎರಡನೆಯ ಸ್ಥಾನವನ್ನು ಪಡೆದಿದೆ.

ಮೂರನೇ ಸ್ಥಾನದಲ್ಲಿರುವ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚಿನ ಪದಕಗಳನ್ನು ಪಡೆದಿದೆ. ಇನ್ನು ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಕ್ರಮವಾಗಿ ಕೆನಡಾ ಹಾಗೂ ನ್ಯೂಜಿಲೆಂಡ್‌ ಸ್ಥಾನ ಪಡೆದಿದೆ.

ಕ್ರೀಡಾಕೂಟದ ಕೊನೆಯ ದಿನವಾದ ಇಂದು, ಸೈನಾ ನೆಹ್ವಾಲ್ ಅವರು ಒಲಂಪಿಕ್ ಬೆಳ್ಳಿ ಪದಕ ವಿಜೇತೆ ಹಾಗೂ ವಿಶ್ವದ ಮೂರನೇ ಶ್ರೇಯಾಂಕಿತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು ಅವರನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಪಿ.ವಿ ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಇನ್ನು ಟೇಬಲ್​ ಟೆನ್ನಿಸ್​ನ ಮನಿಕಾ ಬಾತ್ರಾ ನಾಲ್ಕು ಪದಕಗಳನ್ನು ಪಡೆಯುವ ಮೂಲಕ ಭರವಸೆಯ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

ಕಳೆದ ಬಾರಿಯ 2014ರ ಗ್ಲಾಸ್ಗೊ ಕಾಮನ್​ವೆಲ್ತ್​ ಕೂಟದಲ್ಲಿ ಒಟ್ಟು 15 ಚಿನ್ನ. 30 ಬೆಳ್ಳಿ ಮತ್ತು 19 ಕಂಚಿನ ಪದಕ ಸೇರಿ ಒಟ್ಟು 64 ಪದಕ ಗಳಿಸಿದ್ದ ಭಾರತ ಪದಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿತ್ತು. ಈ ಬಾರಿ ಹೆಚ್ಚು ಚಿನ್ನದ ಪದಕ ಗಳಿಸಿ ಮೂರನೇ ಸ್ಥಾನಕ್ಕೆ ಏರಿದೆ.

ಕಾಮನ್​ವೆಲ್ತ್​ ಆರಂಭವಾಗಿದ್ದ ಕ್ಯಾರಾರಾ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿಯೇ ವೈಭವದ ಸಮಾರೋಪ ಸಮಾರಂಭ ನಡೆಯಲಿದೆ. ಆಸ್ಟ್ರೇಲಿಯಾದ ಖ್ಯಾತ ಪಾಪ್ ಗಾಯಕ ಗೇ ಸೆಬಾಸ್ಟಿಯನ್, ಸಮಂತಾ ಜೇಡ್ ಹಾಗೂ ದಿ ವೆರೋನಿಕಾಸ್ ಕಾರ್ಯಕ್ರಮ ನೀಡಲಿದ್ದಾರೆ. ಕೇವಲ ಸಮಾರೋಪ ಸಮಾರಂಭಕ್ಕಾಗಿ 65 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕ್ವೀನ್ಸ್ ಲ್ಯಾಂಡ್ ಮುಖ್ಯಮಂತ್ರಿ ಕೂಡ ಸಮಾರಂಭದಲ್ಲಿ ಇರಲಿದ್ದಾರೆ.

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಬಾಕ್ಸರ್ ಮೇರಿ ಕೋಮ್ ಸ್ವರ್ಣ ಗೆಲ್ಲುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದಾರೆ. 35 ವರ್ಷದ ಮೇರಿ ಕೋಮ್ ಸ್ಪರ್ಧೆ ಮಾಡುವ ಕೊನೆಯ ಕಾಮನ್​ವೆಲ್ತ್​ ಇದಾಗಿದ್ದು, ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗುವ ಗೌರವ ಪಡೆದುಕೊಂಡಿದ್ದಾರೆ.

Commonwealth Games 2018, India record 26 golds, third position

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ