ಚುನಾವಣಾ ಆಯೋಗದಿಂದ ಚುನಾವಣಾ ಗೀತೆ ಬಿಡುಗಡೆ

ಬೆಂಗಳೂರು:ಏ-14:ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕರ್ನಾಟಕ ಚುನಾವಣಾ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ.

ರಾಜ್ಯದಲ್ಲಿ ಮೊದಲ ಬಾರಿಗೆ ಚುನಾವಣೆಗೊಂದು ಗೀತೆಯನ್ನು ರೂಪಿಸಲಾಗಿದೆ. ಈ ಗೀತೆ ಮತದಾನದ ಅರಿವು ಮೂಡಿಸಲು ಜನ ಸಮುದಾಯವನ್ನು ಮುಟ್ಟಲಿದೆ. ಈ ಗೀತೆಯನ್ನು ಬಿಡುಗಡೆ ಮಾಡಿದ ಸಂಜೀವ್ ಕುಮಾರ್ ಈ ಚುನಾವಣಾ ಗೀತೆ ನೈತಿಕ ಮತದಾನ ಹಾಗೂ ಹೆಚ್ಚು ಜನರು ಮತದಾನ ಮಾಡುವಂತೆ ಉತ್ತೇಜಿಸಲಿದೆ ಎಂದರು.

ಈ ಚುನಾವಣಾ ಗೀತೆಯನ್ನು ಖ್ಯಾತ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ರಚಿಸಿ ನಿರ್ದೇಶಿಸಿದ್ದಾರೆ. ಈ ಚುನಾವಣಾ ಗೀತೆ ರೂಪಿಸಲು ಪ್ರತಿಭಾವಂತರ ತಂಡ ಒಗ್ಗೂಡಿದ್ದು ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಗಾಯಕ ವಿಜಯ್ ಪ್ರಕಾಶ್ ಮತ್ತು ಅವರ ತಂಡ ಹಾಡಿದೆ. ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಈ ಗೀತೆಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಗೀತೆ ರಾಜ್ಯದ ಎಲ್ಲೆಡೆ ಚಿತ್ರೀಕರಣಗೊಂಡಿದ್ದು ರಾಜ್ಯದ ವಿಭಿನ್ನತೆಯನ್ನು ಬಿಂಬಿಸಲಿದೆ.

ವಿಧಾನಸೌಧದಲ್ಲೂ ಈ ಗೀತೆಗಾಗಿ ಚಿತ್ರೀಕರಣ ನಡೆಸಲಾಗಿದೆ. 150ಕ್ಕೂ ಹೆಚ್ಚು ಮಂದಿ ಕಲಾವಿದರು ಈ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಗರಾಜ್ ಭಟ್, `ನಮ್ಮ ತಂಡ ಮೀಡಿಯಾ ಕನೆಕ್ಟ್ ಸಹಯೋಗದಲ್ಲಿ ಕರ್ನಾಟಕದ ನೈಜ ಸ್ಫೂರ್ತಿಯನ್ನು ಈ ಗೀತೆಯಲ್ಲಿ ತಂದಿದ್ದೇವೆ. ಇದರಲ್ಲಿ ಸಂದೇಶ ಸ್ಪಷ್ಟವಾಗಿದ್ದು ಪ್ರತಿಯೊಬ್ಬರೂ ಹೊರಬಂದು ಮತದಾನ ಏಕೆ ಮಾಡಬೇಕೆಂದು ಹೇಳುತ್ತದೆ. ಈ ಗೀತೆ ಈ ಬಾರಿ ಮತದಾನ ಹೆಚ್ಚಿಸಲು ಉತ್ತೇಜಿಸಲಿದೆ. ಈ ಸಂದರ್ಭದಲ್ಲಿ ಚುನಾವಣೆಗೆ ಗೀತೆ ರೂಪಿಸಲು ಉತ್ತೇಜಿಸಿದ ಮುಖ್ಯ ಚುನಾವಣಾಧಿಕಾರಿಗೆ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ನಾವು ವಿಶೇಷ ಚೇತನರು, ಆದಿವಾಸಿಗಳು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಯುವ ಮತದಾರರನ್ನು ಈ ಗೀತೆಯ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೇವೆ’ ಎಂದರು.

ಈ ಚುನಾವಣಾ ಗೀತೆ ಆಯೋಗದ ವಸ್ತು- ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆಗಳನ್ನು ಪ್ರತಿಪಾದಿಸುತ್ತದೆ. ಈ ಗೀತೆ ನೈತಿಕ ಮತದಾನ ಉತ್ತೇಜಿಸಲು ಬಹುಮುಖ್ಯ ಪಾತ್ರ ವಹಿಸಲಿದೆ ಮತ್ತು ಇದರಿಂದ ಮತದಾರರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಮತದಾನದ ಪ್ರಮಾಣ ಹೆಚ್ಚಿಸಲಿದ್ದಾರೆ. ಈ ಗೀತೆಯ ರೇಡಿಯೊ, ಟೀವಿ, ಚಲನಚಿತ್ರಗಳು ಮತ್ತು ಇತರೆ ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ.

Election Commission,releases, Karnataka Election Anthem

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ