ಗೆಲುವಿಗಾಗಿ ಸುರಕ್ಷಿತ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಹುಡುಕಾಟ: ಅಮಿತ್ ಶಾ ವ್ಯಂಗ್ಯ

ಬೆಳಗಾವಿ, ಏ. 13
ಈ ಬಾರಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಆ ಕ್ಷೇತ್ರದ ಜನರ ಆಕ್ರೋಶಕ್ಕೆ ಭಯಗೊಂಡು ಚಾಮುಂಡಿ ಕ್ಷೇತ್ರ ಬಿಟ್ಟು ಬಾದಾಮಿ ಅಥವಾ ವರುಣಾ ಕ್ಷೇತ್ರಗಳಲ್ಲಿ ಸ್ರ್ಪಸಲು ಹುಡುಕಾಟ ನಡೆಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಶುಕ್ರವಾರ ರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯ ಸರ್ಕಾರದ ಮೇಲೆ ರಾಜ್ಯದ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚಾಮುಂಡಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದ ಸಿದ್ದರಾಮಯ್ಯಗೆ ಆ ಕ್ಷೇತ್ರದಲ್ಲಿ ಜನರ ಆಕ್ರೋಶಕ್ಕೆ ಭಯಗೊಂಡು ಬೇರೆ ಕ್ಷೇತ್ರಗಳ ಹುಡುಕಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ವಿರುದ್ಧ ಅಮಿತ್ ಶಾ ಹರಿಹಾಯ್ದರು.
ನಾನು ಪ್ರವಾಸ ಮಾಡಿದ ಕಡೆಗಳಲ್ಲಿ ಸಿದ್ದರಾಮಯ್ಯನವರ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಜನತೆ ಯಡಿಯೂರಪ್ಪನವರ ಮೇಲೆ ಪ್ರೀತಿ ತೋರುತ್ತಿದ್ದಾರೆ. ವಿಧಾನಸಭಾ ಚುನಾವಣೆಯ ಮುನ್ನವೇ ರಾಜ್ಯದ ಜನತೆ ಬಿಜೆಪಿಗೆ ಗೆಲುವಿನ ಸಂದೇಶ ನೀಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರುವುದು ನಿಶ್ಚಿತವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲಾಗುವುದು. ಜೀವನದಲ್ಲಿ ಇದೇ ಮೊದಲ ಬಾರಿಗೆ ಕಿತ್ತೂರು ಚೆನ್ನಮ್ಮನ ನಾಡಿಗೆ ಆಗಿಮಿಸಿದ್ದೇನೆ. 1857ರ ಕ್ರಾಂತಿಗೂ ಮುನ್ನ ಬ್ರಿಟೀಷರ ವಿರುದ್ಧ ರಣ ಕಹಳೆ ಮೊಳಗಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದವಳು ಚೆನ್ನಮ್ಮ ಎಂದು ಅಮಿತ್ ಶಾ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ