ಕಾವೇರಿ ನದಿ ನೀರಿಗಾಗಿ ಕನ್ನಡಿಗರ ಜತೆ ನಾನೂ ಕೂಡ ಟೊಂಕ ಕಟ್ಟಿ ನಿಂತಿದ್ದೇನೆ: ಹಿರಿಯ ನಟ ಅನಂತ್ ನಾಗ್ ಘೋಷಣೆ

ಬೆಂಗಳೂರು;ಏ-10: ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ರಾಜ್ಯದ ಪರ ಹೋರಾಟ ನಡೆಸಲು ಹಿರಿಯ ನಟ ಅನಂತ್ ನಾಗ್ ಸಜ್ಜಾಗಿದ್ದಾರೆ. ತಮಿಳುನಾಡಿನಲ್ಲಿ ಸಿನಿಮಾ ಕಲಾವಿದರು ಕಾವೇರಿ ನೀರಿಗಾಗಿ ಪ್ರತಿಭಟನೆ ಹಾದಿಹಿಡಿದಿರುವ ಬೆನ್ನಲ್ಲೇ ಕನ್ನಡದ ಹಿರಿಯ ನಟ ಅನಂತನಾಗ್ ಕಾವೇರಿ ಹೋರಾಟಕ್ಕೆ ಧುಮಿಕಿರುವುದು ಮತ್ತಷ್ಟು ಬಲಬಂದಂತಾಗಿದೆ.

ಕಾವೇರಿ ಸಂಬಂಧ ತಮಿಳುನಾಡು ಪ್ರತಿಭಟನೆ ಕುರಿತು ವಿಡಿಯೋ ತುಣುಕು ಹರಿಬಿಟ್ಟಿರುವ ಅನಂತನಾಗ್ ಅವರು, ತಮಿಳುನಾಡಿನ ರಾಜಕೀಯ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಅಷ್ಟೇಅಲ್ಲ ತಮಿಳು ಸೂಪರ್ ಸ್ಟಾರ್‌ಗಳಾದ ರಜನಿಕಾಂತ್, ಕಮಲ್ ಹಾಸನ್‌ ಅವರಿಗೂ ಅನಂತನಾಗ್ ಟಾಂಗ್ ನೀಡಿದ್ದಾರೆ.

ಬಹಳ ಹಿಂದಿನಿಂದಲೂ ಕಾವೇರಿ ವಿಚಾರವಾಗಿ ತಮಿಳುನಾಡು ಕ್ಯಾತೆ ತೆಗೆಯುತ್ತಲೇ ಬಂದಿದೆ. ಸದ್ಯ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುಕೂಲ ಮಾಡಿ ಕೊಡಲಿದೆ ಎಂದು ಅವರು ಆರೋಪಿಸುತ್ತಿದ್ದಾರೆ. ಆದರೆ, ಕೇಂದ್ರದಲ್ಲಿ ಯಾವುದೇ ಸರ್ಕಾರ ಕಾವೇರಿ ವಿಚಾರದಲ್ಲಿ ಏನೇ ತೀರ್ಮಾನ ತೆಗೆದುಕೊಂಡರು, ಅಷ್ಟೇ ಏಕೆ ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧವೂ ಅಲ್ಲಿಯ ರಾಜಕಾರಣಿಗಳು ಅಪಸ್ವರ ಎತ್ತುತ್ತ ಬಂದಿದ್ದಾರೆ.

ತಮಿಳುನಾಡಿನಲ್ಲಿ ಸದ್ಯ ಯಾವುದೇ ಚುನಾವಣೆಯಿಲ್ಲದಿದ್ದರೂ, ಅಲ್ಲಿಯ ನಟರಿಬ್ಬರು ರಾಜಕೀಯ ಪ್ರವೇಶ ಮಾಡುವ ಆತುರದಲ್ಲಿ ಹಿಂದಿನ ಪೀಳಿಗೆಯಂತೆಯೇ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಭಾಷೆ, ನೆಲ-ಜಲ ಕಾಪಾಡಿಕೊಳ್ಳುವ ಉದಾತ್ತ ಕರ್ತವ್ಯದಲ್ಲಿ ಸಮಸ್ತ ಕನ್ನಡಿಗರ ಜತೆ ನಾನೂ ಕೂಡ ಟೊಂಕ ಕಟ್ಟಿ ನಿಂತಿದ್ದೇನೆ ಎಂದು ಅನಂತನಾಗ್‌ ಘೋಷಿಸಿದ್ದಾರೆ.

Cauvery water dispute,Kannada actor Ananth Nag,counters

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ