ಕಬ್ಬಿನ ಗದ್ದೆಗೆ ಹಾಕಲಾಗಿದ್ದ ರಾಸಾಯನಿಕಯುಕ್ತ ನೀರು ಕುಡಿದು 13 ಮೇಕೆಗಳು ಸಾವು:

ಮಂಡ್ಯ, ಏ.8-ಕಬ್ಬಿನ ಗದ್ದೆಗೆ ಹಾಕಲಾಗಿದ್ದ ರಾಸಾಯನಿಕಯುಕ್ತ ನೀರು ಕುಡಿದು 13 ಮೇಕೆಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊನ್ನಗಳ್ಳಿ ಮಠ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.
ಹೊನ್ನಗಳ್ಳಿ ಮಠ ಗ್ರಾಮದ ರೈತ ವೀರ ಎಂಬುವರು ಎಂದಿನಂತೆ ಮೇಕೆಗಳನ್ನು ಮೇಯಿಸಲು ಜಮೀನಿನ ಕಡೆಗೆ ಕರೆದೊಯ್ದರು. ಇಡೀ ದಿನ ಅಲ್ಲಿಇಲ್ಲಿ ಮೇವು ತಿಂದು ಹೊಟ್ಟೆ ತುಂಬಿಸಿಕೊಂಡಿದ್ದ ಮೇಕೆಗಳು ಸಮೀಪದಲ್ಲೇ ಇದ್ದ ಕಬ್ಬಿನ ಗದ್ದೆಯಲ್ಲಿ ನೀರು ಕುಡಿಯಲು ಹೋಗಿವೆ. ಕಬ್ಬಿನ ಗದ್ದೆಗೆ ಸಿಂಪಡಿಸಲಗಿದ್ದ ಕೆಮಿಕಲ್‍ಯುಕ್ತ ನೀರನ್ನು ಕುಡಿದ ಮೇಕೆಗಳು ಸ್ವಲ್ಪ ಸಮಯದಲ್ಲೇ ಅಸ್ವಸ್ಥಗೊಂಡು ಸ್ಥಳದಲ್ಲೇ ಸಾವನ್ನಪ್ಪಿವೆ.
ಈ ಬಗ್ಗೆ ಗಾಬರಿಗೊಂಡ ರೈತ ಸ್ಥಳ ಪಶುವೈದ್ಯರನ್ನು ಕರೆಯಿಸಿ ಪರೀಕ್ಷೆ ಮಾಡಿದ್ದಾರೆ. ಆ ವೇಳೆಗಾಗಲೇ ಎಲ್ಲ ಕುರಿಗಳು ಮೃತಪಟ್ಟಿದ್ದವು. ಈ ಕುರಿಗಳೆಲ್ಲ ವಿಷಕಾರಿ ಯೂರಿಯಾಯುಕ್ತ ನೀರು ಕುಡಿದು ಸಾವನ್ನಪ್ಪಿರುವುದಾಗಿ ವೈದ್ಯರು ಪರೀಕ್ಷಿಸಿ ಖಚಿತಪಡಿಸಿದ್ದಾರೆ.
ಹೈನುಗಾರಿಕೆಯಿಂದಲೇ ಕುಟುಂಬ ನಿರ್ವಹಿಸುತ್ತಿದ್ದ ನನಗೆ ಮೇಕೆಗಳ ಸಾವಿನಿಂದ ಭಾರೀ ನಷ್ಟ ಉಂಟಾಗಿದೆ. ಸುಮಾರು 1.5 ಲಕ್ಷದಿಂದ 2 ಲಕ್ಷದವರೆಗೂ ನಷ್ಟ ಉಂಟಾಗಿದ್ದು, ಜೀವನ ನಿರ್ವಹಣೆಗೆ ಪರಿಹಾರ ದೊರಕಿಸಿಕೊಡಬೇಕೆಂದು ರೈತ ವೀರ ಅವರು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ