ಮುಖ್ಯಮಂತ್ರಿಯಾಗಿದ್ದ 20 ತಿಂಗಳಲ್ಲಿ ನನಗೆ ಅನುಭವ ಇರಲಿಲ್ಲ. ಅದಾದ ನಂತರ ಸಾಕಷ್ಟು ಅನುಭವ ಪಡೆದಿದ್ದೇನೆ : ಎಚ್.ಡಿ.ಕುಮಾರಸ್ವಾಮಿ

ಕೊಳ್ಳೇಗಾಲ, ಏ.4- ಮುಖ್ಯಮಂತ್ರಿಯಾಗಿದ್ದ 20 ತಿಂಗಳಲ್ಲಿ ನನಗೆ ಅನುಭವ ಇರಲಿಲ್ಲ. ಅದಾದ ನಂತರ ಸಾಕಷ್ಟು ಅನುಭವ ಪಡೆದಿದ್ದೇನೆ. ಆಡಳಿತದ ಬಗ್ಗೆ ಅರ್ಥ ಮಾಡಿಕೊಂಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಿನ್ನೆ ಸಂಜೆ ಪಟ್ಟಣದಲ್ಲಿ ಬಿಎಸ್‍ಪಿ ಹಾಗೂ ಜೆಡಿಎಸ್ ಬೃಹತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಸೌಧದಲ್ಲಿ ಕುಳಿತು ಅಧಿಕಾರ ನಡೆಸುವುದಲ್ಲ, ನಿಮ್ಮ ಮನೆ ಬಾಗಿಲಿಗೆ ಆಡಳಿತ ತರುತ್ತೇನೆ. ಸದಾ ನಿಮ್ಮೊಂದಿಗೆ ಇದ್ದು ಸಮಸ್ಯೆ ಪರಿಹರಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಮತದಾನದ ಹಕ್ಕು ಕೊಟ್ಟಿರುವುದು ಚುನಾವಣೆ ಬಂದಾಗ ಮತ ಹಾಕಿ ಸುಮ್ಮನಾಗಿ ಎಂದಲ್ಲ, ಚುನಾವಣೆ ಮುಗಿದ ನಂತರ ಜವಾಬ್ದಾರಿ ಇರುತ್ತದೆ. ಯಾರೇ ಅಧಿಕಾರದಲ್ಲಿರಲಿ ಅವರನ್ನು ಪ್ರಶ್ನಿಸುವ ಮನೋಭಾವ ಇರಬೇಕು. ನಿಮ್ಮ ಹಕ್ಕು ಪಡೆಯಬೇಕು. ನಿಮ್ಮಗಳ ಸಲಹೆ ಮೇರೆಗೆ ಅಧಿಕಾರ ನಡೆಸುವಂತಾಗಬೇಕು ಎಂದು ತಿಳಿ ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ ಸ್ಪರ್ಧಿಸುತ್ತಿರುವ ಜಿ.ಟಿ.ದೇವೇಗೌಡರು ಗಂಡು ಮಗ ಅವರನ್ನು ಮಣಿಸಲು ನಿಮ್ಮಿಂದ ಸಾಧ್ಯವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಸವಾಲು ಹಾಕಿದರು.

ನಾನು ಹಾರ್ಟ್ ಪೇಶೆಂಟ್. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಆದರೆ, ನನ್ನ ಜೀವಕ್ಕಿಂತ ರಾಜ್ಯದ ಆರೂವರೆ ಕೋಟಿ ಜನರ ಜೀವ ಮುಖ್ಯ. ಅದಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್, ಬಿಜೆಪಿ ರಾಜ್ಯದ ಜನರಿಗೆ ಮಾಡಿರುವ ಅನ್ಯಾಯಕ್ಕಾಗಿ ಬಯ್ಯಬಹುದು. ಆದರೆ, ಇದರಿಂದ ಏನೂ ಪರಿಹಾರ ಸಿಗುವುದಿಲ್ಲ. 58 ಸಾವಿರ ಕೋಟಿ ರೈತರ ಬೆಳೆ ನಷ್ಟವಾಗಿದೆ. ರೈತರ ಸಾಲ ಮನ್ನಾ ಆಗಬೇಕು. ನಮ್ಮ ಒತ್ತಡದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ 2017ರ ಜೂನ್ 28ರಂದು ಸಾಲ ಮಾಡುವುದಾಗಿ ಹೇಳಿದ್ದರು.ಆದರೆ, ಇದುವರೆಗೆ ಈ ಬ್ಯಾಂಕ್‍ಗಳಿಗೆ ಸರ್ಕಾರ ಹಣವನ್ನೇ ಹಾಕಿಲ್ಲ ಎಂದು ಆರೋಪಿಸಿದರು.

ರೈತರ ಸಾಲಮನ್ನಾ ಮಾಡಲು ಸಾಧ್ಯವಾಗದ ಇವರಿಗೆ ಈವರೆಗೆ ನೀಡಿರುವ ಭಾಗ್ಯಗಳನ್ನು ಈಡೇರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಬಿಎಸ್‍ಪಿ ರಾಜ್ಯಾಧ್ಯಕ್ಷ ಹಾಗೂ ಕೊಳ್ಳೇಗಾಲ ಕ್ಷೇತ್ರದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎನ್.ಮಹೇಶ್ ಮಾತನಾಡಿ, ನನ್ನನ್ನು ಸೋಲಿಸಿ ಸಾಯಿಸಬೇಡಿ. ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

40 ವರ್ಷಕ್ಕೆ ರಾಜಕೀಯಕ್ಕೆ ಬಂದೆ. ನನಗೆ ಈಗ 63 ವರ್ಷ. ನಿರಂತರವಾಗಿ ಸೋಲಿಸುತ್ತಾ ಬಂದಿದ್ದೀರಿ. 2013ರಲ್ಲಿ ಎರಡನೆ ಸ್ಥಾನಕ್ಕೆ ತಂದು ನಿಲ್ಲಿಸಿದಿರಿ. ಈ ಬಾರಿಯಾದರೂ ನನಗೆ ಗೆಲುವು ತಂದುಕೊಡಿ. ಉಸಿರಿರೋತನಕ ನಿಮ್ಮಗಳ ಸೇವೆ ಮಾಡುತ್ತೇನೆ. ನಿಮ್ಮ ನಂಬಿಕೆ ಹುಸಿ ಮಾಡುವುದಿಲ್ಲ ಎಂದು ತಿಳಿಸಿದರು.

ಮುಖಂಡರಾದ ಜಿ.ಟಿ.ದೇವೇಗೌಡ, ಎಚ್.ವಿಶ್ವನಾಥ್, ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಟಿ.ಎ.ಶರವಣ, ಚಿಕ್ಕಣ್ಣ, ಎಸ್.ಮಹೇಂದರ್, ಜಫ್ರುಲ್ಲಾಖಾನ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ