ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ತೀವ್ರಗೊಂಡ ಪ್ರತಿಭಟನೆ: 300ಕ್ಕೂ ಹೆಚ್ಚು ಜನರ ಬಂಧನ

ಚೆನ್ನೈ:ಏ-3; ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಆಗ್ರಹಿಸಿ ತಮಿಳುನಾಡು ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಂಡಿದ್ದು, 300ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಶಾಸಕ ಎನ್ ಕಾರ್ತಿಕ್ ಅವರು ಸೇರಿದಂತೆ ಹಲವು ಪ್ರತಿಭಟನಾಕಾರರು ಸಿಂಗನಲ್ಲೂರ್ ರೈಲ್ವೇ ನಿಲ್ದಾಣಕ್ಕೆ ತೆರಳು ರೈಲುಗಳನ್ನು ಮುತ್ತಿಗೆ ಹಾಕಿದರು. ಈ ವೇಳೆ 50 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದರು. ರೈಲ್ವೇ ಹಳಿಗಳನ್ನು ಮುತ್ತಿಗೆ ಹಾಕಿದ ಕಾರಣ ರೈಲು ಸಂಚಾರದಲ್ಲಿ 15 ನಿಮಿಷಗಳ ವ್ಯತ್ಯಾಸಗಳು ಕಂಡು ಬಂದವು.

ಜಿಲ್ಲಾ ಸಂಯೋಜಕರಾದ ಮುತ್ತುಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ರಸ್ತೆ ತಡೆ ನಡೆಸಲಾಗಿದೆ. ಇದರಿಂದ ಹಲವೆಡೆ ಸಂಚಾರ ದಟ್ಟಣೆ ಸಮಸ್ಯೆಗಳು ಎದುರಾಗಿದ್ದವು.
ಈ ನಡುವೆ ಡಿಎಂಕೆಯ ಇಬ್ಬರು ನಾಯಕರಾದ ಟಿ.ಮುರುಗನ್ (53) ಹಾಗೂ ಸಿಂಗೈ ಸುಧಾಸಿವಮ್ (54) ಎಂಬುವವರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ.

ಈ ನಡುವೆ ಕೆಲ ಪ್ರತಿಭಟನಾಕಾರರು ಕೊಯಿಮತ್ತೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್’ಟಿಸಿ ಬಸ್ ಗಳನ್ನು ತಡೆಹಿಡಿದಿದ್ದಾರೆ. ಈ ವೇಳೆ ಬಸ್’ನ್ನು ಧ್ವಂಸಗೊಳಿಸಲು ಯತ್ನ ನಡೆದಿದೆ. ನಂತರ ಮಧ್ಯೆ ಪ್ರವೇಶ ಮಾಡಿದ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೆ ಪ್ರತಿಭಟನಾನಿರತರು ಅಲ್ಲದೆ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣಾ ವಾಕ್ಯಗಳನ್ನು ಕೂಗಿದರು.
ರಾಜ್ಯದಾದ್ಯಂತ ನಡೆದ ಪ್ರತಿಭಟನೆ ವೇಳೆ ಒಟ್ಟು 324 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೂಡಲೇ ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡಬೇಕೆಂದು ಒತ್ತಾಯಿಸಿ ಡಿಎಕೆ ಏ.5 ರಂದು ತಮಿಳುನಾಡು ಬಂದ್ ಗೆ ಕರೆ ನೀಡಿದೆ.
ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು, ರೈತರು ವ್ಯಾಪಾರಿಗಳು, ವಿದ್ಯಾರ್ಥಇ ಸಂಘಟನೆಗಳಿಂದ ಸಹಕಾರವನ್ನು ಕೋರಲಾಗಿದ್ದು ಬಂದ್ ನಡೆಸಲು ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.

Cauvery Water Dispute,Protests,Tamil Nadu,DMK members attempt self-immolation

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ