ಜಿಎಸ್‌ಟಿ ಮತ್ತು ನೋಟ್‌ ಬ್ಯಾನ್‌ ನಿಂದ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ: ರಾಹುಲ್ ಗಾಂಧಿ

ಮೈಸೂರು:ಮಾ-24: ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನಗರದ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.

ಜಿಎಸ್‌ಟಿ ಮತ್ತು ನೋಟ್‌ ಬ್ಯಾನ್‌ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿ ಕಾರಿದರು. ಸರ್ಕಾರದ ನಿರ್ಧಾರದಿಂದ ಭಾರತದ ಆರ್ಥಿಕ ಸ್ಥಿತಿ ಕುಸಿದು ಹೋಗಲು ಕಾರಣವಾಗಿದೆ. ಉದ್ಯೋಗ ಸೃಷ್ಟಿಯೂ ಸಾಧ್ಯವಾಗಿಲ್ಲ ಎಂದರು.

ಕೇಂದ್ರದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಜಿಎಸ್ ಟಿಯಡಿಯಲ್ಲಿ ಏಕರೂಪ ತೆರಿಗೆ ವಿಧಾನಕ್ಕೆ ಪ್ರೋತ್ಸಾಹ ನೀಡುತ್ತಿದ್ದೆವು. ಜಿಎಸ್ ಟಿಯನ್ನು ನಾವು ವಿರೋಧಿಸುವುದಿಲ್ಲ. ಆದರೆ ಕೇಂದ್ರದ ಸರ್ಕಾರದ ಜಾರಿ ವಿಧಾನ ಮಾತ್ರ ತಪ್ಪಾಗಿದೆ. ಮೋದಿ ಸರ್ಕಾರ ಈ ವಿಚಾರದಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸಿ ಅತಿಯಾದ ತೆರಿಗೆ ದರಗಳನ್ನು ವಿಧಿಸಿದೆ. ಕೇಂದ್ರದಲ್ಲಿ ಯುಪಿಎ ಮತ್ತೆ ಅಧಿಕಾರಕ್ಕೆ ಬಂದರೆ ಜಿಎಸ್ ಟಿಯನ್ನು ಮರು ರಚನೆ ಮಾಡುತ್ತೇವೆ ಎಂದರು.

ವಿದ್ಯಾರ್ಥಿನಿಯೊಬ್ಬರು ರಾಹುಲ್‌ ಸರ್‌ ಎಂದಾಗ.. ನೀವು ತಪ್ಪು ತಿಳಿಯುವುದಿಲ್ಲ ಅಂದರೆ ನನ್ನನ್ನು ರಾಹುಲ್‌ ಅಂತ ಕರೀರಿ..ಸರ್‌ ಬೇಡ ಎಂದರು.

ಇನ್ನೋರ್ವ ವಿದ್ಯಾರ್ಥಿನಿ ಕನ್ನಡದಲ್ಲಿ ಪ್ರಶ್ನೆ ಕೇಳಿದರು. ಈ ವೇಳೆ ಉಪನ್ಯಾಸಕರು ಇಂಗ್ಲೀಷ್‌ನಲ್ಲಿ ಪ್ರಶ್ನೆ ಕೇಳು ಎಂದು ಸೂಚನೆ ನೀಡಿದರು. ಇದಕ್ಕುತ್ತರವಾಗಿ ರಾಹುಲ್‌ ಕನ್ನಡದಲ್ಲೇ ಪ್ರಶ್ನೆ ಕೇಳಬಹುದು ತೊಂದರೆ ಇಲ್ಲ. ನಾನು ಭಾಷಾಂತರಿಸಿಕೊಂಡು ಉತ್ತರ ನೀಡುತ್ತೇನೆ ಎಂದರು.

‘ಕಾಂಗ್ರೆಸ್‌ನದು ಒಂದು ದೇಶ ಹಲವು ಐಡಿಯಾ’ ಆದರೆ ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನದ್ದು ಒಂದು ದೇಶ ಒಂದು ಐಡಿಯಾ’ ಎಂದರು. ಇದೇವೇಳೆ ಕರ್ನಾಟಕಕ್ಕೂ ಉತ್ತರ ಪ್ರದೇಶಕ್ಕೂ ತುಂಬಾ ಅಂತರವಿದೆ.ನಾವು ಕರ್ನಾಟಕದಲ್ಲಿ ಯಾರ ಮೇಲೂ ಯಾವುದನ್ನೂ ಹೇರಿಕೆ ಮಾಡಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ರಾಹುಲ್ ಗಾಂಧಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.

Rahul gandhi,Mysore,maharani college

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ