ಮಂಜೇಗೌಡರ ಜತೆ ದೂರವಾಣಿಯಲ್ಲಿ ಮಾತನಾಡಿದ್ದು ನಾನೇ. ಏನೀವಾಗ ? – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಮಾ.22- ಮಂಜೇಗೌಡರ ಜತೆ ದೂರವಾಣಿಯಲ್ಲಿ ಮಾತನಾಡಿದ್ದು ನಾನೇ. ಏನೀವಾಗ ? ನಾನು ಕಾಂಗ್ರೆಸ್ ಪಕ್ಷದ ಮುಖಂಡ. ಕಾಂಗ್ರೆಸ್ ಗೆಲ್ಲಿಸಿ ಎಂದು ಹೇಳದೆ ಜೆಡಿಎಸ್ ಗೆಲ್ಲಿಸಿ ಎಂದು ಹೇಳಲಿಕ್ಕಾಗುತ್ತದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.
ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡರ ಜತೆ ಪೆÇೀನ್‍ನಲ್ಲಿ ನಡೆಸಿದ ಸಂಭಾಷಣೆ ವೈರಲ್ ಆಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ತೀಕ್ಷ್ಣಣವಾಗಿ ಪ್ರತಿಕ್ರಿಯಿಸಿದ ಅವರು, ಮಂಜೇಗೌಡರ ಜತೆ ದೂರವಾಣಿಯಲ್ಲಿ ಮಾತನಾಡಿರುವುದು ನಿಜ. ದೂರವಾಣಿ ಸಂಭಾಷಣೆ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಯಾರ ಭಯವೂ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಮುಖಂಡ, ಜೆಡಿಎಸ್ ಸೋಲಿಸಬೇಕೆಂದು ಹೇಳಿದ್ದೇನೆ. ನಾನು ನನ್ನ ಕಾರಿನ ಬಳಿ ಹೊರಗೆ ನಿಂತು ನೂರಾರು ಮಂದಿ ಸಮ್ಮುಖದಲ್ಲಿಯೇ ದೂರವಾಣಿ ಮೂಲಕ ಮಂಜೇಗೌಡರೊಂದಿಗೆ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ಮಾತನಾಡಿ, ನನ್ನನ್ನು ಸೋಲಿಸುವಂತೆ ಕರೆ ಕೊಟ್ಟಿದ್ದಾರೆ. ಹಾಗಿದ್ದ ಮೇಲೆ ಆ ಸಂದರ್ಭವನ್ನು ನೀವು ಹೇಗೆ ಅರ್ಥೈಸುವಿರಿ ಎಂದು ಪ್ರಶ್ನಿಸಿದರು.
ಉಡುಪಿ ಮಠಕ್ಕೆ ರಾಹುಲ್‍ಗಾಂಧಿ ಭೇಟಿ ನೀಡದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಾಹುಲ್‍ಗಾಂಧಿ ಅವರು ಉಡುಪಿಗೆ ಹೋಗೇ ಇಲ್ಲ. ಮಠಕ್ಕೆ ಭೇಟಿ ನೀಡಲು ಹೇಗೆ ಸಾಧ್ಯ ಎಂದು ಮರುಪ್ರಶ್ನೆ ಹಾಕಿದರು.
ಮೈಸೂರಿಗೆ ರಾಹುಲ್‍ಗಾಂಧಿ ಅವರು ಮೈಸೂರಿಗೆ ಭೇಟಿ ನೀಡಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲಿದ್ದಾರೆ. ಅವರು ಸುತ್ತೂರು ಮಠಕ್ಕೆ ತೆರಳುವ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡ ವಿ.ಶ್ರೀನಿವಾಸ್‍ಪ್ರಸಾದ್ ಅವರು ಪುಸ್ತಕ ಬರೆದು ಅದರಲ್ಲಿ ನಂಜನಗೂಡು ಉಪಚುನಾವಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಉಪ ಚುನಾವಣೆಯಲ್ಲಿ ಅಕ್ರಮವಾಗಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಿತ್ತು. ಆದರೆ, ಈಗ ಪುಸ್ತಕ ಬರೆಯುವುದರಿಂದ ಏನು ಪ್ರಯೋಜನ? ಸುಳ್ಳುಗಳನ್ನು ಪುಸ್ತಕದಲ್ಲಿ ಬರೆಯುವುದರಿಂದ ಏನು ಲಾಭ ಎಂದರು.
ಲಿಂಗಾಯಿತ ಧರ್ಮ ವಿಚಾರದಲ್ಲಿ ಸರ್ಕಾರ ಮೂಗು ತೂರಿಸಬಾರದಿತ್ತು ಎಂದು ಮಾಜಿ ಲೋಕಾಯುಕ್ತ ಸಂತೋಷ್‍ಹೆಗಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಕಲಂ 2ರ ಅಡಿಯಲ್ಲಿ ಸರ್ಕಾರಕ್ಕೆ ಅಧಿಕಾರವಿದೆ. ತಾವು ಜಸ್ಟೀಸ್ ನಾಗಮೋಹನದಾಸ್ ವರದಿ ಆಧರಿಸಿ ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದರು.
ಎಚ್.ಸಿ.ಮಹದೇವಪ್ಪ ಅವರು ಹಿರಿಯ ರಾಜಕಾರಣಿ. ಅವರು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ