ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ಸಮರ: ರಾಜ್ಯದ ವಿವಿಧ ಅಧಿಕಾರಿಗಳ ಕಛೇರಿ,ನಿವಾಸದ ಮೇಲೆ ದಾಳಿ: ದಾಖಲೆಗಳ ಪರಿಶೀಲನೆ

ಬೆಂಗಳೂರು:ಮಾ-20: ರಾಜ್ಯದ ವಿವಿಧೆಡೆಗಳಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಬೆಳಗಾವಿ, ಕಲಬುರಗಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಎಸಿಬಿ ಎಸ್‌ಪಿ ಅಮರನಾಥ್ ರೆಡ್ಡಿ ನೇತೃತ್ವದ ತಂಡ ಬೆಳಗಾವಿ ಸ್ಮಾರ್ಟ್ ಸಿಟಿ ಎಂಜನಿಯರ್ ಕಿರಣ್ ಸುಬ್ಬರಾವ್ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಕಲಬುರಗಿಯ ಇಬ್ಬರು ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆದಿದೆ. ಜಿಲ್ಲೆ ಹುಮ್ನಾಬಾದ್ ತಾಲೂಕಿನ ಕಾರಾಂಜಾ ನೀರಾವರಿ ಯೋಜನೆಯ ಎಇಇ ವಿಜಯ್ ಕುಮಾರ್ ಮನೆ ಮೇಲೆ ಬೀದರ್ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದು, ಮಹತ್ವದ ದಾಖಲೆ ಪರಿಶೀಲನೆ ನಡೆಸಿದ್ದಾರೆ. ನಗರದ ಭಗವತಿ ನಗರದಲ್ಲಿರುವ ವಿಜಯ್ ಕುಮಾರ್ ನಿವಾಸ ಹಾಗೂ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಮುಂಚಬಾಳ ಗ್ರಾಮದ ನಿವಾಸದ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.ಸಾರಿಗೆ ಇಲಾಖೆಯ ಉಪ ಮುಖ್ಯ ಭದ್ರತಾ ಅಧಿಕಾರಿ ಶ್ರೀಪತಿ ದೊಡ್ಡ ಲಿಂಗಣ್ಣನವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

ಚಿಕ್ಕಮಗಳೂರಿನ ಉಪ ತಹಶಿಲ್ದಾರ್ ಕೀರ್ತಿ ಜೈನ್ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕೀರ್ತಿ ಜೈನ್ ವಿರುದ್ಧ ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಹಾಗೂ ಫಾರಂ 53, ಫಾರಂ 54 ನಲ್ಲಿ ವಂಚನೆ ಆರೋಪ ಕೇಳಿಬಂದಿತ್ತು. ಪಶ್ಚಿಮ ವಲಯದ ಎಸ್‌ಪಿ ಶೃತಿ ಹಾಗೂ ಚಿಕ್ಕಮಗಳೂರಿನ ಎಸಿಬಿ ಡಿವೈಎಸ್‌ಪಿ ನಾಗೇಶ್ ಶೆಟ್ಚಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಇನ್ನು ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಗೋಪಾಲಕೃಷ್ಣ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ACB, raids,across state

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ