ನವದೆಹಲಿ:ಮಾ-16: ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಅಧಿಕೃತವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಿಂದ ಹೊರಬಂದಿದೆ.
ಒಂದು ವಾರದ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಸಂಪುಟದಿಂದ ಇಬ್ಬರು ಟಿಡಿಪಿ ಸದಸ್ಯರು ಹೊರಬಂದಿದ್ದರು. ವೈಎಸ್‌ಆರ್ ಕಾಂಗ್ರೆಸ್ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾದ ಬೆನ್ನಲ್ಲೇ ಟಿಡಿಪಿ ಮೈತ್ರಿಯಿಂದ ಹೊರಬಿದ್ದಿದ್ದು, ಬಿಜೆಪಿಗೆ ಭಾರಿ ಹಿನ್ನಡೆಯಾದಂತಾಗಿದೆ.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ವಿಚಾರದಲ್ಲಿ ಮೋದಿ ಸರಕಾರ ನಿರ್ಲಕ್ಷ್ಯದ ಬಗ್ಗೆ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಮಾರ್ಚ್ 8ರಂದು ನರೇಂದ್ರ ಮೋದಿ ಸಂಪುಟದಿಂದ ಇಬ್ಬರು ಟಿಡಿಪಿ ಸದಸ್ಯರು ಹೊರ ಬರುವ ಮೂಲಕ ಮೈತ್ರಿ ಮುರಿದು ಬೀಳುವ ಬಗ್ಗೆ ಅಂತಿಮ ಸಂದೇಶ ರವಾನಿಸಲಾಗಿತ್ತು.
ಸಂಸತ್ತಿನಲ್ಲಿ 16 ಸದಸ್ಯರನ್ನು ಹೊಂದಿರುವ ಆಂದ್ರ ಪ್ರದೇಶದ ಅಂತಿಮವಾಗಿ ಎನ್ ಡಿಎ ಮತ್ರಿಕೂಟದಿಂದ ಹೊರಬಂದಿದೆ. ಲೋಕಸಭೆಯಲ್ಲಿ ಬಿಜೆಪಿ 275 ಸದಸ್ಯರನ್ನು ಹೊಂದಿದ್ದು, ಇದರಲ್ಲಿ ಇಬ್ಬರು ನಾಮನಿರ್ದೇಶನಗೊಂಡ ಸದಸ್ಯರು ಸೇರ್ಪಡೆಗೊಂಡಿದ್ದಾರೆ.
ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ಧ ವಿಶ್ವಾಸ ರಹಿತ ನಡೆ ಕೈಗೊಂಡಿತ್ತು. ಎನ್‌ಡಿಎ ಸರಕಾರದ ವಿರುದ್ಧ ಇದೇ ಮೊದಲ ಬಾರಿಗೆ ಮಿತ್ರ ಪಕ್ಷವೊಂದು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾಗಿದೆ. ಉಭಯ ಸದನಗಳಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕೆಂದು ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಬಹುದಿನಗಳಿಂದ ಚಳುವಳಿ ನಡೆಸುತ್ತಿದ್ದವು.
ಕೇಂದ್ರ ಸರಕಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕೊಡದಿದ್ದರೆ ಏಪ್ರಿಲ್ 6ಕ್ಕೆ ಪಕ್ಷದ ಎಲ್ಲ ಎಂಪಿಗಳು ರಾಜೀನಾಮೆ ನೀಡುವುದಾಗಿ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಎಚ್ಚರಿಸಿದ್ದಾರೆ.