ಕಾವೇರಿ ಸ್ಕೀಂ ರಚನೆ ಸಂಬಂಧ ನವದೆಹಲಿಯಲ್ಲಿ ಕರೆದಿದ್ದ ಸಭೆ ಮುಂದೂಡಿಕೆ

ನವದೆಹಲಿ, ಮಾ.16- ಕಾವೇರಿ ಸ್ಕೀಂ ರಚನೆ ಸಂಬಂಧ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆ ಕುರಿತು ಸಂಸದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನವದೆಹಲಿಯಲ್ಲಿ ಕರೆದಿದ್ದ ಸಭೆಯನ್ನು ಮುಂದೂಡಲಾಗಿದೆ.

ಸುಪ್ರೀಂಕೋರ್ಟ್ ತೀರ್ಪಿನಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಆಕ್ಷೇಪ ಸಲ್ಲಿಸಬೇಕೆ, ಬೇಡವೆ ಎಂಬ ಬಗ್ಗೆ ರಾಜ್ಯದ ಸಂಸದರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನವದೆಹಲಿಯಲ್ಲಿಂದು ಸಿಎಂ ಸಿದ್ದರಾಮಯ್ಯನವರು ಸಭೆ ಕರೆದಿದ್ದರು.

ಸಂಸದರ ಹಾಜರಾತಿ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಸಭೆಯನ್ನು ಮಾ.22ಕ್ಕೆ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆರು ವಾರದೊಳಗೆ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಹಿರಿಯ ವಕೀಲರು ಹಾಗೂ ಸಂಸದರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿ ನವದೆಹಲಿಯಲ್ಲಿಂದು ಕಾಂಗ್ರೆಸ್ ಸಂಸದರ ಸಭೆ ಕರೆದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ