ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯ ಬಿಜೆಪಿ ನಾಯಕರ ಹೋರಾಟಕ್ಕೆ ರಾಷ್ಟ್ರೀಯ ನಾಯಕರು ಫುಲ್ ಕುಶ್: ಉತ್ತರ ಕರ್ನಾಟಕದತ್ತ ದೃಷ್ಟಿ ಹರಿಸಲು ಸೂಚನೆ

ಬೆಂಗಳೂರು,ಮಾ.14-ಮೊದಲ ಬಾರಿಗೆ ನಾಯಕರೆಲ್ಲರೂ ಆಲಸ್ಯ ಬಿಟ್ಟು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ದ ಬೀದಿಗಿಳಿದಿರುವ ಹಿನ್ನೆಲೆಯಲ್ಲಿ ಸಂತೃಪ್ತಿ ವ್ಯಕ್ತಪಡಿಸಿರುವ ಬಿಜೆಪಿಯ ಕೇಂದ್ರ ನಾಯಕರು ಇದೀಗ ಉತ್ತರ ಕರ್ನಾಟಕದತ್ತ ದೃಷ್ಟಿ ಹರಿಸುವಂತೆ ಸೂಚಿಸಿದ್ದಾರೆ.

ಕರಾವಳಿ ತೀರಾ ಪ್ರದೇಶ ಹಾಗೂ ಪ್ರಸ್ತುತ ನಗರದಲ್ಲಿ ಬೆಂಗಳೂರು ರಕ್ಷಿಸಿ ಮೂಲಕ ಕಳೆದ ಹಲವು ದಿನಗಳಿಂದ ತಮ್ಮ ತಮ್ಮ ವೈಮನಸ್ಯ ಮರೆತು ನಾಯಕರು ಒಗ್ಗಟ್ಟು ಪ್ರದರ್ಶಿಸಿ ಕಾಂಗ್ರೆಸ್‍ನ್ನು ನಿದ್ದೆಗೆಡುವಂತೆ ಮಾಡಿದ್ದಾರೆ.

ನಾಯಕರ ಈ ಒಗ್ಗಟ್ಟಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮೆಚ್ಚುಗೆ ವ್ಯಕ್ತಪಡಿಸಿದ್ದು , ಹೈದರಾಬಾದ್ ಕರ್ನಾಟಕದಲ್ಲಿ ಕಾರ್ಯಕ್ರಮ ರೂಪಿಸಬೇಕೆಂದು ಸಲಹೆ ಮಾಡಿದ್ದಾರೆ.

ಇದಕ್ಕೂ ಮುನ್ನವೇ ಬಿಜೆಪಿ ನಾಯಕರು ಅಮಿತ್ ಷಾ ಅವರನ್ನು ಈ ತಿಂಗಳ 30 ಇಲ್ಲವೇ 31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿಗೆ ಮತ್ತೊಂದು ಬಾರಿ ಕರೆಸಿ ಶಕ್ತಿಪ್ರದರ್ಶಿಸಲು ಮುಂದಾಗಿದ್ದಾರೆ.

ಅಮಿತ್ ಷಾ ಅವರ ವೇಳಾಪಟ್ಟಿಯನ್ನು ನೋಡಿಕೊಂಡು ಹಳೆಯ ಮೈಸೂರು ಕರ್ನಾಟಕ ಪ್ರದೇಶಗಳಾದ ಮೈಸೂರು, ಹಾಸನ, ಮಂಡ್ಯ ಮತ್ತಿತರ ಕಡೆ ರಾಷ್ಟ್ರೀಯ ಅಧ್ಯಕ್ಷರ ಸರಣಿ ಸಭೆಗಳನ್ನು ನಡೆಸಲು ತೀರ್ಮಾನಿಸಿದ್ದಾರೆ.

ಈಗಾಗಲೇ ವೇಳಾಪಟ್ಟಿಯನ್ನು ಕಳುಹಿಸಿಕೊಡಲಾಗಿದ್ದು , ಅಧ್ಯಕ್ಷರ ದಿನಾಂಕ ನಿಗದಿಯಾಗಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಮೈಸೂರಿಗೆ ಬಂದು ಶಕ್ತಿ ಪ್ರದರ್ಶಿಸಿದ್ದರು. ಇದರಿಂದ ಹುಮ್ಮಸ್ಸಿನಲ್ಲಿರುವ ರಾಜ್ಯ ನಾಯಕರು, ಕಾರ್ಯಕರ್ತರು ಮತ್ತೊಮ್ಮೆ ಅಮಿತ್ ಷಾ ಅವರನ್ನು ಕರೆಸಲು ನಿರ್ಧರಿಸಿದ್ದಾರೆ.

ಹೈದರಾಬಾದ್ ಕರ್ನಾಟಕದತ್ತ ಚಿತ್ತ:
ಕರಾವಳಿ ತೀರಾ ಪ್ರದೇಶ ಹಾಗೂ ಬೆಂಗಳೂರಿನಲ್ಲಿ ಯಶಸ್ವಿ ಯಾತ್ರೆಗಳನ್ನು ನಡೆಸಿರುವ ರಾಜ್ಯ ನಾಯಕರು ಈಗ ಹೈದರಾಬಾದ್ ಕರ್ನಾಟಕದತ್ತ ಗಮನಹರಿಸಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಈ ಭಾಗದ ಮೂರರಿಂದ ನಾಲ್ಕು ಕಡೆ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುವುದು ಬಿಜೆಪಿ ಲೆಕ್ಕಾಚಾರವಾಗಿದೆ.

ಹೈದರಾಬಾದ್ ಕರ್ನಾಟಕದ ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಾಪುರ, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸಲು ಪಕ್ಷ ಮುಂದಾಗಿದೆ.

ಈಗಾಗಲೇ ಮುಂಬೈ ಕರ್ನಾಟಕದ ಬೆಳಗಾವಿಯಲ್ಲಿ ಕಾರ್ಯಕರ್ತರ ಸಮಾವೇಶಕ್ಕೆ ನರೇಂದ್ರ ಮೋದಿ ಆಗಮಿಸಲು ಒಪ್ಪಿಕೊಂಡಿದ್ದಾರೆ. ಇತ್ತ ರಾಯಚೂರಿನಲ್ಲೂ ಬೃಹತ್ ಸಮಾವೇಶ ನಡೆದರೆ ಕೂಡಲಸಂಗಮದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಜರುಗಲಿದೆ.

ಕಾಂಗ್ರೆಸ್‍ನ ಲಿಂಗಾಯಿತ ಅಸ್ತ್ರವನ್ನು ಒಡೆಯಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು ಹೈದರಾಬಾದ್ ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಸಭೆಗಳನ್ನು ನಡೆಸುವ ಮೂಲಕ ಕಾಂಗ್ರೆಸ್‍ನ ಲೆಕ್ಕಾಚಾರವನ್ನು ಬುಡಮೇಲು ಮಾಡುವ ಚಿಂತನೆಯಲ್ಲಿದ್ದಾರೆ.

ಬಳ್ಳಾರಿ, ಕಲಬುರಗಿ, ಬಾಗಲಕೋಟೆ, ವಿಜಾಪುರಗಳಲ್ಲಿ ನರೇಂದ್ರ ಮೋದಿಯಿಂದ ಬೃಹತ್ ಸಮಾವೇಶಗಳನ್ನು ನಡೆಸುವ ಮೂಲಕ ಚುನಾವಣೆಗೆ ಸಜ್ಜಾಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ