ಖಾಸಗಿ ರೆಸಾರ್ಟ್‍ನಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ಬೆಂಗಳೂರು, ಮಾ.14-ವಿಧಾನಸಭಾ ಚುನಾವಣೆ ಎಂಬ ಮಹಾಯುದ್ಧಕ್ಕೆ ತಯಾರಿ ಆರಂಭಿಸಿರುವ ಕಾಂಗ್ರೆಸ್ ಹುರಿಯಾಳುಗಳ ಆಯ್ಕೆಗೆ ಮಹತ್ವದ ಸಭೆ ನಡೆಸುವ ಮೂಲಕ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.

ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‍ನಲ್ಲಿ ಇಂದು ಬೆಳಗ್ಗೆಯಿಂದ ಆರಂಭವಾಗಿರುವ ಸಭೆಯಲ್ಲಿ 2018ರ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಭೆ ಸೇರಲಾಗಿದೆ.

ಇದರಲ್ಲಿ ಬೆಂಗಳೂರಿನ ಬಹುತೇಕ ಸಚಿವರು, ಸಂಸದರು ಭಾಗಿಯಾಗಿದ್ದು, ನಾಳೆಯೂ ಸಹ ಘಟಾನುಘಟಿಗಳ ಸುದೀರ್ಘ ಸಭೆ ನಡೆಸಲಾಗುತ್ತಿದೆ.
ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿಯನ್ನು ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆಯಲ್ಲಿ ರಚಿಸಲಾಗಿದ್ದು, ವಿಭಾಗವಾರು ಉಪಸಮಿತಿಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ.

ಇಂದಿನ ಸಭೆಯಲ್ಲಿ ಮೊದಲ ಹಂತದ ಸುಮಾರು 120 ಕ್ಷೇತ್ರಗಳ ಅಭ್ಯರ್ಥಿಗಳ ಸ್ಥಾನಕ್ಕೆ ಒಂದೆರಡು ಹೆಸರನ್ನು ಗುರುತಿಸಿ ಶಾರ್ಟ್‍ಲಿಸ್ಟ್ ಸಿದ್ಧಪಡಿಸಲಾಗಿದೆ. ಇದು ಹೈಕಮಾಂಡ್‍ಗೆ ರವಾನೆಯಾಗಲಿದೆ.

2ನೇ ಹಂತದಲ್ಲಿ ತೀವ್ರ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿನ ಹಲವಾರು ಅಭ್ಯರ್ಥಿಗಳ ಪೈಕಿ ಕನಿಷ್ಠ ಮೂವರ ಹೆಸರನ್ನು ಅಂತಿಮಗೊಳಿಸಿ ಪಟ್ಟಿ ಕಳುಹಿಸುವ ನಿರೀಕ್ಷೆ ಇದೆ.
ಒಟ್ಟಾರೆ ಆಯ್ಕೆ ಪ್ರಕ್ರಿಯೆಯಲ್ಲೂ ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದು, ಪ್ರತಿ ಹಂತದಲ್ಲೂ ಅಭ್ಯರ್ಥಿಗಳ ಆಯ್ಕೆಗೆ ಕೂಲಂಕಷವಾಗಿ ಪರಿಶೀಲಿಸಿ ಪಟ್ಟಿ ಮಾಡಲು ಮುಂದಾಗಿದೆ.

ಐದು ಜನರನ್ನೊಳಗೊಂಡ ಒಂದು ಸಮಿತಿಯನ್ನು ಮೈಸೂರು, ಕಲಬುರಗಿ, ಬೆಳಗಾವಿ ವಿಭಾಗವಾರು ರಚಿಸಿದ್ದು, ಆ ಸಮಿತಿಗಳ ಮುಂದೆ ಬರುವ ಅಭ್ಯರ್ಥಿಗಳ ಅರ್ಜಿಯನ್ನು ಪರಿಶೀಲಿಸಿ ಸಿದ್ಧಪಡಿಸಿದ ಪಟ್ಟಿಯನ್ನು ಮಾತೃ ಸಮಿತಿಗೆ ವರ್ಗಾಯಿಸುವುದು ಸೇರಿದಂತೆ ಮೂರ್ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕೈಗೊಂಡು ಅಂತಿಮ ಪಟ್ಟಿಯನ್ನು ರಚಿಸಲಾಗುತ್ತಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 1704 ಆಕಾಂಕ್ಷಿಗಳು ಕಾಂಗ್ರೆಸ್‍ನ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದಾರೆ. 43 ಸದಸ್ಯರಿರುವ ಚುನಾವಣಾ ಸಮಿತಿ ಪ್ರತಿ ಹಂತದಲ್ಲೂ ಸಿದ್ಧವಾಗಿ ಬರುವ ಪಟ್ಟಿಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದೆ.

ಈ ಸಮಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಮಲ್ಲಿಕಾರ್ಜುನ್ ಖರ್ಗೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ಆಸ್ಕರ್ ಫರ್ನಾಂಡೀಸ್, ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ, ಮಾರ್ಗರೇಟ್ ಅಳ್ವಾ, ಅಲ್ಲಂ ವೀರಭದ್ರಪ್ಪ, ಆರ್.ವಿ.ದೇಶಪಾಂಡೆ, ಕೆ.ರೆಹಮಾನ್‍ಖಾನ್ ಅವರನ್ನೊಳಗೊಂಡ 43 ಮಂದಿ ಇದ್ದಾರೆ.

ಹಲವಾರು ಕ್ಷೇತ್ರಗಳಲ್ಲಿ ಶಾಸಕರು, ಸಂಸದರು ಹಾಗೂ ಮಾಜಿ ಶಾಸಕರು ಸಹ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಬಹುತೇಕ ಶಾಸಕರಿಗೆ ಈಗಾಗಲೇ ಟಿಕೆಟ್ ಖಚಿತ ಎಂದು ಹೇಳಲಾಗಿದೆ. ಇನ್ನು ಅನೇಕರಿಗೆ ಟಿಕೆಟ್ ಕೈ ತಪ್ಪಲಿದೆ.

ಚುನಾವಣಾ ಸಮಿತಿ ಸಭೆಯಲ್ಲಿ ಜನಪ್ರಿಯತೆ ಹೊಂದಿರುವವರು, ಪಕ್ಷದಲ್ಲಿ ನಿಷ್ಠರಾಗಿ ಕಾರ್ಯ ನಿರ್ವಹಿಸುವವರು, ಸ್ಥಳೀಯರೊಂದಿಗೆ ಅವರು ಗುರುತಿಸಿಕೊಂಡಿರುವ ರೀತಿ, ಬೇರೆ ಪಕ್ಷದೊಂದಿಗೆ ಕೈ ಜೋಡಿಸಿದ್ದಾರೆಯೇ ಎಂಬುದು ಸೇರಿದಂತೆ ಎಲ್ಲಾ ರೀತಿಯ ಪರಾಮರ್ಶೆಗೆ ಒಳಪಡಿಸಿ ಶಾರ್ಟ್‍ಲಿಸ್ಟ್‍ನ್ನು ರಚಿಸಿದ್ದಾರೆ.

ಉಳಿದಂತೆ ಅರ್ಜಿ ಸಲ್ಲಿಸದೆ ಇರುವ ಕೆಲವರನ್ನು ಅವರ ಜನಪ್ರಿಯತೆ, ಸ್ಥಳೀಯವಾಗಿ ಅವರ ಕೆಲಸ ಕಾರ್ಯಗಳು, ಗೆಲ್ಲಲೇಬೇಕೆಂಬ ಕಾರಣಕ್ಕಾಗಿ ಪ್ರಭಾವಿಗಳ ಲಾಬಿ ಇಂತಹ ಹಲವು ಅಂಶಗಳ ಹಿನ್ನೆಲೆಯಲ್ಲಿ ಅವರ ಹೆಸರನ್ನು ಪರಿಶೀಲಿಸಿ ಎರಡನೇ ಸುತ್ತಿನ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಚಿಂತನೆ ಇದೆ.

ಈಗಾಗಲೇ ಬಹುತೇಕರಿಗೆ ಟಿಕೆಟ್ ಸಿಗುವ ಮುನ್ಸೂಚನೆ ದೊರೆತಿರುವುದರಿಂದ ಅರ್ಜಿ ಸಲ್ಲಿಕೆಗೆ ನೂಕು ನುಗ್ಗಲಂತೂ ಕಂಡು ಬಂದಿಲ್ಲ. ಆದರೆ ಕೆಲವೊಂದು ಕ್ಷೇತ್ರಗಳಲ್ಲಿ ಅತಿಯಾದ ಸ್ಪರ್ಧೆ ಏರ್ಪಟ್ಟು 10-15 ಮಂದಿ ಅರ್ಜಿ ಸಲ್ಲಿಸಿದ್ದರೆ ಮತ್ತೆ ಕೆಲವು ಕಡೆ ಒಂದಿಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ತೀವ್ರ ಸ್ಪರ್ಧೆಯಿರುವ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯೊಂದಿಗೆ ಕಡಿಮೆ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿ ಜಯ ಸಾಧಿಸುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಲ್ಲಾ ರೀತಿಯಲ್ಲೂ ಸಮಿತಿಗಳು ಕಸರತ್ತು ನಡೆಸಿವೆ.

ಅದರಲ್ಲೂ ಪ್ರಮುಖವಾಗಿ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವಂತಹ, ಪಕ್ಷದ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ, ಸಂಘಟನೆಯಲ್ಲೂ ಚತುರರಾಗಿರುವ, ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವಂತಹವರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಟಿಕೆಟ್ ನೀಡಲಾಗುತ್ತಿದ್ದು, ಅಮೂಲಾಗ್ರ ಪರಿಶೀಲನೆಯೊಂದಿಗೆ ಟಿಕೆಟ್ ಹಂಚಿಕೆ ಮಾಡಲು ಪಕ್ಷ ಸನ್ನದ್ಧವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ