ಪಾಟ್ನಾ:ಮಾ-11: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದು ಬಿಜೆಪಿಯಲ್ಲ, ಆರ್‌ಜೆಡಿ ಎಂದು ಹೇಳುವ ಮೂಲಕ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಮಾಜಿ ಆರೋಗ್ಯ ಮಂತ್ರಿ ತೇಜ್ ಪ್ರತಾಪ್ ಯಾದವ್ ಹೇಳಿಕೆ ನೀಡಿದ್ದಾರೆ.
ತೇಜ್ ಪ್ರತಾಪ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ತೇಜ್ ಪ್ರತಾಪ್, ತಾನು ಜಾತ್ಯತೀತ ಮಂದಿರ ಕುರಿತು ಈ ಹೇಳಿಕೆ ನೀಡಿದ್ದಾಗಿ ತಿಳಿಸಿದ್ದಾರೆ.
ಬಿಜೆಪಿ ಯಾವಾಗಲೂ ರಾಮ ಮಂದಿರ ನಿರ್ಮಾಣದ ಬಗ್ಗೆ ಹೇಳುತ್ತಿದ್ದು, ಇನ್ನೂ ಯಾವಾಗ ಎಂದು ಗೊತ್ತಾಗಿಲ್ಲ. ನಾವು ಹಿಂದೂ, ಮುಸ್ಲಿಂ, ಸಿಖ್ , ಕ್ರೈಸ್ತರು ಸೇರಿದಂತೆ ಎಲ್ಲ ಧರ್ಮಗಳ ಬಡವರು, ದಲಿತರೆನ್ನದೆ ಒಟ್ಟು ಸೇರಿ ಪ್ರಾರ್ಥನೆ ಸಲ್ಲಿಸಬಹುದಾದ ಮಂದಿರ ನಿರ್ಮಿಸುತ್ತೇವೆ. ನಂತರ ಬಿಜೆಪಿ ಮಂದಿರ ವಿಷಯದಿಂದ ದೂರವುಳಿಯುತ್ತದೆ ಎಂದು ಟ್ವಿಟರ್‌ನಲ್ಲಿ ಅವರು ವಿವರಣೆ ನೀಡಿದ್ದಾರೆ.
ತೇಜ್ ಪ್ರತಾಪ್ ಅವರ ಈ ಹೇಳಿಕೆಗೆ ಬಿಜೆಪಿಯ ದರ್ಭಾಂಗ್ ಶಾಸಕ ಸಂಜಯ್ ಸರೊಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಬಾಬರಿ ಮಸೀದಿ ಧ್ವಂಸವಾದಾಗ ಯುಪಿಎ ಸರಕಾರದಲ್ಲಿ ಆರ್‌ಜೆಡಿ ಮೈತ್ರಿ ಪಕ್ಷವಾಗಿತ್ತು. ಇದಾದ ಬಳಿಕ ಉತ್ತರಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿ ಸರಕಾರಗಳನ್ನು ಕಾನೂನು ಬಾಹಿರವಾಗಿ ಕೆಳಗಿಳಿಸಲಾಗಿತ್ತು. ಈಗ ರಾಹುಲ್ ಗಾಂಧಿ ಅವರು ಜನಿವಾರ ಧರಿಸುತ್ತಾರೆ. ಮಮತಾ ಬ್ಯಾನರ್ಜಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಲಾಲು ಪುತ್ರ ಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ. ಇವೆಲ್ಲವೂ ನರೇಂದ್ರ ಮೋದಿ ಅವರ ಪ್ರಭಾವ ಎಂದು ಹೇಳಿದ್ದಾರೆ.