ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ: ತ್ರಿಪುರಾ, ನಾಗಾಲ್ಯಾಂಡ್ ನಲ್ಲಿ ಬಿಜೆಪಿ, ಮೆಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ

ಅಗರ್ತಲಾ/ಕೊಹಿಮಾ:ಮಾ-3: ಈಶಾನ್ಯ ರಾಜ್ಯಗಳಾದ ತ್ರಿಪುರಾ,ಮೆಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆಗೆ ನಡೆದ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ತ್ರಿಪುರಾ ಹಾಗೂ ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ ಮೆಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.

ಇಂದು ಬೆಳಗ್ಗೆಯಿಂದ ಮತ ಎಣಿಕೆ ಆರಂಭಗೊಂಡಿದ್ದು, ತ್ರಿಪುರಾದಲ್ಲಿ ಬಿಜೆಪಿ 38ಸ್ಥಾನಗಳಲ್ಲಿ, ಸಿಪಿಎಂ 21 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇತರರು ಒಂದು ಸ್ಥಾನದಲ್ಲಿ ಮುನ್ನಡೆಯಲ್ಲಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ಬಿಜೆಪಿ 29 ಸ್ಥಾನ, ಎನ್‌ಪಿಎಫ್‌ 26, ಕಾಂಗ್ರೆಸ್ 1 ಹಾಗೂ ಇತರರು4 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ​ಮೇಘಾಲಯದಲ್ಲಿ ಎನ್‌ಪಿಪಿ 14, ಕಾಂಗ್ರೆಸ್ 25, ಬಿಜೆಪಿ7, ಇತರರು 15 ಸ್ಥಾನಗಳಲ್ಲಿ ಮುಂದಿದ್ದಾರೆ.

ತ್ರಿಪುರಾದಲ್ಲಿ ಫೆ.18, ನಾಗಾಲ್ಯಾಂಡ್‌ ಮತ್ತು ಮೇಘಾಲಯಗಳಲ್ಲಿ ಫೆ.27ರಂದು ಚುನಾವಣೆ ನಡೆದಿತ್ತು. ಮೂರೂ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಈ ಮೂರು ರಾಜ್ಯಗಳು ತಲಾ 60 ಸದಸ್ಯ ಬಲ ಹೊಂದಿವೆಯಾದರೂ, ಚುನಾವಣೆ ನಡೆದಿರುವುದು ತಲಾ 59 ಸ್ಥಾನಗಳಿಗೆ ಮಾತ್ರ.

ತ್ರಿಪುರಾದಲ್ಲಿ ಕೇಂದ್ರ ಅರೆಸೇನಾಪಡೆ ಮತ್ತು ತ್ರಿಪುರಾ ಸ್ಟೇಟ್‌ ರೈಫಲ್ಸ್‌ ಸೇರಿ ಮೂರು ಸ್ತರಗಳಲ್ಲಿ ಭದ್ರತೆ ಕಲ್ಪಿಸಲಾಗಿದೆ ಎಂದು ಅಲ್ಲಿನ ಚುನಾವಣಾಧಿಕಾರಿ ಶ್ರೀರಶಂ ತರಣಿಕಾಂತ ಹೇಳಿದ್ದಾರೆ.

ನಾಗಾಲ್ಯಾಂಡ್‌ನ 59 ಕ್ಷೇತ್ರಗಳ ಮತ ಎಣಿಕೆ ಎಂಟು ಗಂಟೆಗೆ ಆರಂಭವಾಗಿದ್ದು, ಈಶಾನ್ಯ ಅನ್ಗಮಿಯಲ್ಲಿ ಎನ್‌ಡಿಪಿಪಿ ಮುಖ್ಯಸ್ಥ ನಿಪ್ಯು ರಿಯೊ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಲ್ಲಿನ ಮುಖ್ಯ ಚುನಾವಣಾಧಿಕಾರಿ ಅಭಿಜಿತ್‌ ಸಿನ್ಹಾ ಹೇಳಿದ್ದಾರೆ.

ಮೇಘಾಲಯದ ಹದಿಮೂರು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಅಲ್ಲಿನ ಚುನಾವಣಾಧಿಕಾರಿ ಖರ್‌ಕೊಂಗರ್‌ ಹೇಳಿದ್ದಾರೆ.
Tripura, Meghalaya ,Nagaland Election Results

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ