ಆರನೇ ವೇತನ ಆಯೋಗದ ಮಧ್ಯಂತರ ವರದಿ ಏಪ್ರಿಲ್ 1 ರಿಂದ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಆರನೇ ವೇತನ ಆಯೋಗದ ಮಧ್ಯಂತರ ವರದಿ ಏಪ್ರಿಲ್ 1 ರಿಂದ ಜಾರಿಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು; ಮಾ.3-ಆರನೇ ವೇತನ ಆಯೋಗದ ಮಧ್ಯಂತರ ವರದಿ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಅಂತಿಮ ವರದಿಯನ್ನೂ ಕೂಡ ನಮ್ಮ ಸರ್ಕಾರವೇ ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಬೃಹತ್ ಸಮಾವೇಶ, ಜನಸ್ನೇಹಿ ಆಡಳಿತ ವಿಚಾರಣ ಸಂಕಿರಣ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಆರನೇ ವೇತನ ಆಯೋಗ ರಚಿಸಲಾಗಿತ್ತು. ಅದು ನೀಡಿದ ಮಧ್ಯಂತರ ವರದಿಯನ್ನು ಒಂದಕ್ಷರವೂ ಬದಲಾವಣೆ ಮಾಡದೆ ಯಥಾವತ್ ಜಾರಿಗೊಳಿಸಿದ್ದೇವೆ. ಅಂತಿಮ ವರದಿ ನೀಡಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಬಹುತೇಕ ಏಪ್ರಿಲ್ ಅಂತ್ಯದೊಳಗೆ ಕೊನೆಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ನಮ್ಮ ಸರ್ಕಾರದ ಅವಧಿ ಮುಕ್ತಾಯವಾಗಲಿದೆ, ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ, ಅಂತಿಮ ವರದಿ ಅನುಷ್ಠಾನಗೊಳ್ಳುವುದೋ, ಇಲ್ಲವೋ ಎಂಬ ಆತಂಕ ಯಾರಿಗೂ ಬೇಡ ಎಂದು ಹೇಳಿದರು.
ಆರನೇ ವೇತನ ಆಯೋಗ ವರದಿ ಈಗಾಗಲೇ ಜಾರಿ ಯಾಗಿರುವುದರಿಂದ ಚುನಾವಣೆಯ ನೀತಿ ಸಂಹಿತೆ ಅಂತಿಮ ವರದಿ ಅನುಷ್ಠಾನಕ್ಕೆ ಅನ್ವಯವಾಗುವುದಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲೇ ಆರನೇ ವೇತನ ಆಯೋಗದ ಎಲ್ಲಾ ವರದಿಗಳನ್ನು ಜಾರಿಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಸಿದ್ದರಾಮಯ್ಯ ಸರ್ಕಾರಿ ನೌಕರರಿಗೆ ವಿರುದ್ಧವಾಗಿದ್ದಾರೆ, ವೇತನ ಹೆಚ್ಚಳಕ್ಕೆ ಅವರು ಒಪ್ಪುವುದಿಲ್ಲ ಎಂದು ಈ ಹಿಂದೆ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ ಅಪಪ್ರಚಾರ ಮಾಡಲಾಗಿತ್ತು. ಈಗಲೂ ಅದೇ ರೀತಿ ಅಪಪ್ರಚಾರ ನಡೆದಿತ್ತು. ಆದರೆ ನಾನು ಸರ್ಕಾರಿ ನೌಕರರಿಗೆ ವಿರುದ್ಧವಾಗಿಲ್ಲ. ಅವರು ನಮ್ಮ ಅಣ್ಣ-ತಮ್ಮಂದಿರೆಂದೇ ಭಾವಿಸಿದ್ದೇನೆ. ನಾವೆಲ್ಲ ಒಂದೇ ಕುಟುಂಬದ ಸದಸ್ಯರಾಗಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಶೇ.90ರಷ್ಟು ಸರ್ಕಾರಿನೌಕರರು ಹಳ್ಳಿಗಾಡಿನಿಂದ ಬಂದವರಾಗಿದ್ದಾರೆ. ರೈತರ ಮಕ್ಕಳಾಗಿ ಅವರ ಕಷ್ಟ -ಸುಖಗಳನ್ನು ಅನುಭವಿಸಿ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಜನರ ಕಷ್ಟಗಳಿಗೆ ನಾವು ಸ್ಪಂದಿಸಬೇಕು. ಸರ್ಕಾರ ನಿಮ್ಮ ಎಲ್ಲಾ ಕಷ್ಟ-ಸುಖಗಳಿಗೆ ಸ್ಪಂದಿಸಲಿದೆ. ನೀವು ಜನರ ಕಷ್ಟಗಳಿಗೆ ಸ್ಪಂದಿಸಿ ಆಗ ನಿಮ್ಮ ಬದುಕು ಸಾರ್ಥಕಗೊಳ್ಳುತ್ತದೆ, ಜನರೂ ನಿಮ್ಮನ್ನು ಗೌರವಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ನೀವು ಪ್ರತಿ ಹಂತದಲ್ಲೂ ನೀವು ಬೆಳೆದು ಬಂದ ಹಾದಿಯನ್ನು ಒಮ್ಮೆ ತಿರುಗಿ ನೋಡಿ ನಂತರ ಮುಂದಿನ ಹೆಜ್ಜೆ ಇಡಿ. ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ರೂಪಿಸುತ್ತದೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಜನರಿಗೆ ತಲುಪಿಸುವ ಜವಾಬ್ದಾರಿ ಕಾರ್ಯಾಂಗದ ಮೇಲಿದೆ. ಸಂವಿಧಾನದ ಆಶಯದಂತೆ ಸಮಸಮಾಜ ನಿರ್ಮಿಸುವುದು ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜವಾಬ್ದಾರಿ ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಮ್ಮ ಸರ್ಕಾರ ಸಾಮಾಜಿಕ ಸ್ಥಿತಿಗತಿ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಶೇ.30ರಷ್ಟು ವೇತನ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು.
ನೌಕರರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುವಂತೆ ರಾಜ್ಯ ಸರ್ಕಾರಿನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಚಿವರಾದ ಎಚ್.ಎಂ.ರೇವಣ್ಣ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಟಿ.ಬಿ.ಜಯಚಂದ್ರ, ಎಚ್.ಆಂಜನೇಯ, ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ, ಉಮೇಶ್‍ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ