ಜೆಡಿಎಸ್ ರಣಕಹಳೆ ಚುನಾವಣಾ ತಳಮಳ : ವಿಶ್ಲೇಷಣೆ

ಬೆಂಗಳೂರು, ಫೆ.18- ಜೆಡಿಎಸ್ ಪಕ್ಷ ನಿನ್ನೆ ಬಿಎಸ್‍ಪಿ ಜತೆ ಸೇರಿ ರಾಜಧಾನಿ ಬೆಂಗಳೂರಿನಲ್ಲಿ ನಡೆಸಿದ ವಿಕಾಸ ಪರ್ವ ಯಾತ್ರೆಯ ಯಶಸ್ವಿ ಹಾಗೂ ಚುನಾವಣೆ ಘೊಷಣೆಗೂ ಮುನ್ನವೇ 126 ಅಭ್ಯರ್ಥಿಗಳನ್ನು ಪ್ರಕಟಿಸಿ ರಣಕಹಳೆ ಮೊಳಗಿಸಿರುವುದು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಲ್ಲಿ ತಳಮಳ ಉಂಟುಮಾಡಿದೆ.

150 ಮಿಷನ್ ಗುರಿಯಿಟ್ಟುಕೊಂಡು ರಾಜ್ಯಾದ್ಯಂತ ಪ್ರವಾಸ, ಪರಿವರ್ತನಾ ಯಾತ್ರೆ ನಡೆಸುತ್ತಿರುವ ಬಿಜೆಪಿ ಹಾಗೂ ಮತ್ತೊಮ್ಮೆ ಅಧಿಕಾರಕ್ಕೆ ಬರಲು ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಿನ್ನೆ ನಡೆದ ಜೆಡಿಎಸ್ ಪಕ್ಷದ ಸಮಾವೇಶದ ಅದ್ಧೂರಿ ಯಶಸ್ವಿಯಿಂದ ಬೆಚ್ಚಿಬಿದ್ದಿವೆ.

ಸಾಮಾನ್ಯವಾಗಿ ಈವರೆಗೆ ಜೆಡಿಎಸ್ ಪಕ್ಷ ನಾಮಪತ್ರ ಸಲ್ಲಿಸುವ ಕಡೆಯ ಕ್ಷಣದವರೆಗೆ ಅಭ್ಯರ್ಥಿಗಳನ್ನು ಆಖೈರುಗೊಳಿಸುತ್ತಿರಲಿಲ್ಲ. ತನ್ನ ಪಕ್ಷದ ಅಭ್ಯರ್ಥಿಗಳಿಗಿಂತ ಅನ್ಯ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿತ್ತು ಎಂಬ ಆರೋಪ ಗಂಭೀರವಾಗಿತ್ತು.

ಆದರೆ, ಈ ಬಾರಿ ಈ ಎಲ್ಲ ಆರೋಪಗಳನ್ನು ಕಳಚಿಟ್ಟು ಹೊರಬಂದಿರುವ ಜೆಡಿಎಸ್ ಚುನಾವಣಾ ದಿನಾಂಕ ಪ್ರಕಟಕ್ಕೂ ಮುನ್ನವೇ ಮೊದಲ ಹಂತವಾಗಿ 126 ಅಭ್ಯರ್ಥಿಗಳನ್ನು ಪ್ರಕಟಿಸಿ ಪ್ರಮಾಣವಚವನ್ನೂ ಬೋಧಿಸಿದ್ದು, ಆಕಸ್ಮಿಕ ಅತಂತ್ರ ಫಲಿತಾಂಶ ಬಂದರೆ ಮೈತ್ರಿ ಸರ್ಕಾರದ ಕನಸು ಕಾಣುತ್ತಿದ್ದ ಬಿಜೆಪಿ, ಕಾಂಗ್ರೆಸ್‍ನಲ್ಲಿ ಆತಂಕ ಉಂಟುಮಾಡಿರುವುದಂತೂ ನಿಜ.

ಬಿಎಸ್‍ಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಯಾರೂ ಊಹಿಸಿರಲಿಲ್ಲ. ರಾಜಕೀಯ ಚಾಣಾಕ್ಷರು ಹಾಗೂ ದೇವೇಗೌಡರು ಅದ್ಯಾವ ತಂತ್ರ ಹೆಣೆದರೋ ಏನೋ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರೊಂದಿಗೆ ಮಾತುಕತೆ ನಡೆಸಿ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‍ಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಸುಮಾರು 21 ಸೀಟುಗಳನ್ನು ಅವರಿಗೆ ಬಿಟ್ಟುಕೊಡುವ ಒಪ್ಪಂದದೊಂದಿಗೆ ಕಣಕ್ಕಿಳಿದೇ ಬಿಟ್ಟರು.

 

 

ನಿನ್ನೆ ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ನಡೆದ ಸಮಾವೇಶ ಅವರ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯವರಿಗೆ ಪರ್ಯಾಯವಾಗಿ ಜೆಡಿಎಸ್ ತನ್ನ ವಿರಾಟ್ ಶಕ್ತಿಯನ್ನು ಪ್ರದರ್ಶಿಸಿತು.

ನಾವ್ಯಾರೂ ಕಿಂಗ್ ಮೇಕರ್ ಅಲ್ಲ. ನಾವೇ ಕಿಂಗ್ ಆಗುವುದರಲ್ಲಿ ಆಶ್ಚರ್ಯವಿಲ್ಲ ಎಂಬ ಸಂದೇಶವನ್ನು ನಿನ್ನೆಯ ಸಮಾವೇಶ ನೀಡಿದಂತಿದೆ.
126 ಅಭ್ಯರ್ಥಿಗಳನ್ನು ಏಕಕಾಲದಲ್ಲಿ ಘೋಷಿಸುವ ಮೂಲಕ ಹೊಸ ಇತಿಹಾಸಕ್ಕೆ ಜೆಡಿಎಸ್ ಪಕ್ಷ ನಾಂದಿ ಹಾಡಿದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಜನಾಶೀರ್ವಾದ ಪಡೆಯುವುದು ಅಷ್ಟೇನು ಕಷ್ಟಸಾಧ್ಯವಲ್ಲ.
ರಾಜ್ಯದಲ್ಲಿ ಬಿಎಸ್‍ಪಿ ಪಕ್ಷಕ್ಕೆ ನೆಲೆ ಇಲ್ಲವಾದರೂ 2008ರ ಚುನಾವಣೆಯಲ್ಲಿ ಸುಮಾರು 38ಕ್ಕೂ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗಿದ್ದಂತೂ ಸತ್ಯ.

ಅದೇ ರೀತಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಈ ಪಕ್ಷ ಅಲ್ಲಲ್ಲಿ ತೊಡರುಗಾಲಾಗಿತ್ತು. ಈ ಎಲ್ಲವನ್ನೂ ಲೆಕ್ಕಾಚಾರ ಹಾಕಿಯೇ ದೇವೇಗೌಡರು ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸೀಟು ಹೊಂದಾಣಿಕೆಯೊಂದಿಗೆ ಕಣಕ್ಕಿಳಿದಿದ್ದಾರೆ.

ಪ್ರಭಾವಿ ಒಕ್ಕಲಿಗರು ದೇವೇಗೌಡರ ಜತೆಯಿದ್ದಾರೆ. ಈಗ ಅಹಿಂದ ವರ್ಗ ಅವರೊಂದಿಗೆ ಹೆಜ್ಜೆ ಹಾಕಿದರೆ ಅಧಿಕಾರ ಸುಸೂತ್ರವಾಗಿ ಜೆಡಿಎಸ್ ಪಾಲಾಗುವುದರಲ್ಲಿ ಆಶ್ಚರ್ಯವಿಲ್ಲ.

ಇನ್ನು ಚುನಾವಣೆಗೆ ಸಮಯಾವಕಾಶವಿದೆ. ಅಲ್ಲಿಯವರೆಗೆ ರಾಜಕೀಯ ಮೇಲಾಟಗಳು ಏನು ನಡೆಯುತ್ತವೆಯೋ… ಮತದಾರರು ಯಾರ ಕೈ ಹಿಡಿಯಲಿದ್ದಾರೆಯೋ… ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ