ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳ ನಕಲಿ ಒಸಿ ಮತ್ತು ಸಿಸಿ ಕರ್ಮಕಾಂಡ, 12 ಲಕ್ಷ ಅಪಾರ್ಟ್‍ಮೆಂಟ್ ನಿವಾಸಿಗಳು ಮನೆಗಳನ್ನು ಕಳೆದುಕೊಳ್ಳುವ ಭೀತಿ

ಬೆಂಗಳೂರು, ಫೆ.10 (SNI)- ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳ ನಕಲಿ ಒಸಿ ಮತ್ತು ಸಿಸಿ ಕರ್ಮಕಾಂಡವನ್ನು ಪಾಲಿಕೆ  ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಬಹಿರಂಗಗೊಳಿಸಿದ್ದು, ಸುಮಾರು 12 ಲಕ್ಷ ಅಪಾರ್ಟ್‍ಮೆಂಟ್ ನಿವಾಸಿಗಳು ಮನೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ವಸತಿ ಸಂಕೀರ್ಣ, ಮಾಲ್, ಮಲ್ಟಿಪ್ಲೆಕ್ಸ್, ಐಟಿ-ಬಿಟಿ ಕಂಪೆನಿಗಳು, ಕೈಗಾರಿಕಾ ಕಟ್ಟಡಗಳ  ಪೈಕಿ ಶೇ.90ಕ್ಕೂ ಹೆಚ್ಚು ಕಟ್ಟಡಗಳಿಗೆ ನೀಡಲಾಗಿರುವುದು ನಕಲಿ ಸಿಸಿ. ಒಸಿಗಳು ಎಂದು ರಮೇಶ್ ಬಹಿರಂಗಪಡಿಸಿದ್ದಾರೆ.

ಇವರ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ  ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ  ಸಚಿವ ಕೆ.ಜೆ.ಜಾರ್ಜ್ ಸೇರಿ 15 ಸಾವಿರಕ್ಕೂ ಹೆಚ್ಚು ನಕಲಿ  ಒಸಿ ಮತ್ತು ಸಿಸಿ ಕೊಟ್ಟಿದ್ದಾರೆ. ಇವುಗಳನ್ನು ಸರಿಯಾಗಿ ನೀಡಿದ್ದರೆ ಒಟ್ಟು 8ಸಾವಿರ ಕೋಟಿ ರೂ.  ಆದಾಯ ಬರಬೇಕಿತ್ತು. ಆದರೆ, ಈಗ ಬಂದಿರುವುದು ಕೇವಲ 3500 ಕೋಟಿ. ಉಳಿದ ಸಾರ್ವಜನಿಕರ ತೆರಿಗೆ ಹಣ ನುಂಗಣ್ಣರ ಪಾಲಾಗಿದೆ ಎಂದು ಆರೋಪಿಸಿದರು.

ಇದು ಬಹುದೊಡ್ಡ ಹಗರಣವಾಗಿದ್ದು, ರಾಜ್ಯದ ಇತಿಹಾಸದಲ್ಲೇ ಮೊಲ ಬಾರಿಗೆ ಈ ಬೃಹತ್ ಹಗರಣಕ್ಕೆ ಸಂಬಂಧಿಸಿದ 6700ಪುಟಗಳಷ್ಟು ದಾಖಲೆಗಳನ್ನು ಎನ್.ಆರ್.ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಮತ್ತು 668 ಕಟ್ಟಡ ನಿರ್ಮಾಣ ಸಂಸ್ಥೆಗಳ ವಿರುದ್ಧ ಲೋಕಾಯುಕ್ತ, ಎಸಿಬಿ ಮತ್ತು ಬಿಎಂಟಿಎಫ್‍ಗಳಲ್ಲಿ ದೂರು ದಾಖಲು ಮಾಡಿರುವುದಾಗಿ ಅವರು ತಿಳಿಸಿದರು.

12 ಲಕ್ಷ ಮಂದಿ ಬೀದಿಪಾಲಾಗುವಂತೆ ಮಾಡಿರುವ 54 ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳನ್ನು ಬಂಧಿಸಬೇಕು ಹಾಗೂ 668 ಬಿಲ್ಡರ್‍ಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಅವರು ಒತ್ತಾಯಿಸಿದರು.

ಇಪ್ಪತ್ತು ಸಾವಿರಕ್ಕೂ ಹೆಚ್ಚು  ವಸತಿ ಸಂಕೀರ್ಣಗಳಿಗೆ ನಕಲಿ  ಒಸಿ(ಆಕ್ಯುಪೆನ್ಷಿ ಸರ್ಟಿಫಿಕೇಟ್) ಮತ್ತು ಸಿಸಿ (ಕೆಮೆನ್ಸ್‍ಮೆಂಟ್ ಸರ್ಟಿಫಿಕೇಟ್)ಗಳನ್ನು ನೀಡಲಾಗಿದೆ.  ಶೇ.80ರಷ್ಟು ಐಟಿ ಕಂಪೆನಿಗಳು, ಟೆಕ್‍ಪಾರ್ಕ್‍ಗಳು, ಮಾಲ್‍ಗಳು ಮತ್ತು ಮಲ್ಟಿಪ್ಲೆಕ್ಸ್‍ಗಳು, ಸ್ಟಾರ್ ಹೋಟೆಲ್‍ಗಳಿಗೆ ನಕಲಿ ಸ್ವಾಧೀನ ಅನುಭವ ಪತ್ರಗಳನ್ನು ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

12 ಲಕ್ಷ ಅನಧಿಕೃತ, ಕಾನೂನು ಬಾಹಿರ ಪ್ಲಾಟ್‍ಗಳ ಮಾರಾಟದಿಂದ 668ಬಿಲ್ಡರ್ ಮಾಫಿಯಾ ಸಂಸ್ಥೆಗಳು ಕನಿಷ್ಠವೆಂದರೂ 60ಸಾವಿರ ಕೋಟಿಗೂ ಹೆಚ್ಚು ಲಾಭವನ್ನು ಗಳಿಸಿವೆ.

ಕಳೆದ 8 ವರ್ಷಗಳಲ್ಲಿ ಪಾಲಿಕೆಯ ನಗರ ಯೋಜನೆ ಇಲಾಖೆಯಿಂದ ನಕ್ಷೆ ಮಂಜೂರಾತಿ ಪಡೆದಿರುವ  ಬೃಹತ್ ವಸತಿ-ವಾಣಿಜ್ಯ ಕಟ್ಟಡಗಳ ಸಂಖ್ಯೆ 50,344. ಇದೇ ಅವಧಿಯಲ್ಲಿ ನೀಡಲಾಗಿರುವ ಸಿಸಿಗಳ ಸಂಖ್ಯೆಯ 2660. ಒಸಿಗಳ ಸಂಖ್ಯೆ 1438.

ಕಳೆದ 18 ವರ್ಷಗಳ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯ ಬೃಹತ್ ಕಟ್ಟಡಗಳಿಗೆ ನೀಡಲಾಗಿರುವ ಒಸಿಗಳ ಸಂಖ್ಯೆ ಕೇವಲ 2129. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಅಪಾರ್ಟ್‍ಮೆಂಟ್‍ಗಳ ಸಂಖ್ಯೆಯ 22,500ಕ್ಕೂ ಹೆಚ್ಚು.

ಬಿಬಿಎಂಪಿ ವ್ಯಾಪ್ತಿಯಲ್ಲಿ 3758 ಐಟಿ ಕಂಪೆನಿಗಳು, 92 ಬಿಟಿ ಕಂಪೆನಿಗಳು, 79 ಟೆಕ್‍ಪಾರ್ಕ್‍ಗಳು, ಮೂರು ಸಾವಿರಕ್ಕೂ ಹೆಚ್ಚು ಬೃಹತ್ ವಾಣಿಜ್ಯ ಸಂಕೀರ್ಣಗಳು ಹಾಗೂ 114 ಮಾಲ್‍ಗಳು ಮತ್ತು ಮಲ್ಟಿಪ್ಲೆಕ್ಸ್‍ಗಳಿವೆ. ಇವುಗಳಿಂದ ಶೇ.90ಕ್ಕೂ ಹೆಚ್ಚು ಬೃಹತ್ ಕಟ್ಟಡಗಳಿಗೆ ನಕಲಿ ಒಸಿಗಳನ್ನು ನೀಡಲಾಗಿದೆ ಎಂದು ರಮೇಶ್ ವಿವರಿಸಿದರು.

ಕಳೆದ 50 ತಿಂಗಳ ಅವಧಿಯಲ್ಲಿ 15 ಸಾವಿರಕ್ಕೂ ಹೆಚ್ಚು ನಕಲಿ ಒಸಿಗಳನ್ನು ನೀಡಲಾಗಿದೆ. ಪಾಲಿಕೆಯ ನಗರ ಯೋಜನೆ ಇಲಾಖೆ ಭ್ರಷ್ಟಾತಿ ಭ್ರಷ್ಟರಿಂದ ತುಂಬಿ ಹೋಗಿದೆ. ಈ  ಇಲಾಖೆಯ ಅನುಮೋದಿತ ಹುದ್ದೆಗಳ ಸಂಖ್ಯೆ 41. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ 123.

ಮುಖ್ಯಮಂತ್ರಿಗಳು, ಸಚಿವ ಕೆ.ಜೆ.ಜಾರ್ಜ್, ಇತರೆ ಸಚಿವರು, ಕಾಂಗ್ರೆಸ್ ಮುಖಂಡರು, ಈ  ಇಲಾಖೆಗೆ ನಿಯೋಜಿಸುವಂತೆ 25 ಲಕ್ಷದಿಂದ ಹಿಡಿದು 3 ಕೋಟಿಗಳ ವರೆಗೆ ಲಂಚ ಪಡೆದು ಶಿಫಾರಸು ಪತ್ರಗಳನ್ನು ಕಡಲೆಪುರಿಯಂತೆ ಹಂಚುತ್ತಿದ್ದಾರೆ ಎಂದು ದೂರಿದರು.

ಒಂದು ವೇಳೆ ಲಂಚ ಪಡೆದಿಲ್ಲವೆಂದಾದರೆ ಬಹಿರಂಗ ಮಂಪರು ಪರೀಕ್ಷೆಗೆ ಒಳಪಡಲಿ ಎಂದು  ಜಾರ್ಜ್ ಅವರಿಗೆ ರಮೇಶ್ ಸವಾಲು ಹಾಕಿದರು.

ನಗರ ಯೋಜನೆ ಇಲಾಖೆಯ ಇಬ್ಬರು ಜಂಟಿ ನಿರ್ದೇಶಕರು, ನಾಲ್ವರು ಉಪನಿರ್ದೇಶಕರು, 32 ಸಹಾಯಕ ನಿರ್ದೇಶಕರು ಮತ್ತು 42 ಇಂಜನಿಯರ್‍ಗಳಿಂದ ಪ್ರತಿ ತಿಂಗಳು ಸಚಿವ ಕೆ.ಜೆ.ಜಾರ್ಜ್ ತಮ್ಮ ಆಪ್ತರ ಮೂಲಕ ಕೋಟ್ಯಂತರ ರೂ.ಗಳನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಕಳೆದ ಮೂರು ವರ್ಷಗಳಿಂದೀಚೆಗೆ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ 4ಸಾವಿರಕ್ಕೂ ಹೆಚ್ಚು ನಕಲಿ ಒಸಿ ನೀಡಲಾಗಿದೆ. ಇಬ್ಬರು ಜಂಟಿ ನಿರ್ದೇಶಕರ ಕಚೇರಿಯಿಂದ 300ಕ್ಕೂ ಹೆಚ್ಚು ಬೃಹತ್ ಅಕ್ರಮ ಕಟ್ಟಡಗಳಿಗೆ ನಕಲಿ ಒಸಿ ನೀಡಲಾಗಿದೆ.

ರಾಜರಾಜೇಶ್ವರಿನಗರ ವಲಯ ಒಂದರಲ್ಲೇ ಕಳೆದ 54 ತಿಂಗಳ ಅವಧಿಯಲ್ಲಿ 900ಕ್ಕೂ ಹೆಚ್ಚು ನಕಲಿ ಒಸಿಗಳನ್ನು ನೀಡಲಾಗಿದೆ. ಬೊಮ್ಮನಹಳ್ಳಿ ವಲಯದ ಉಪ ಆಯುಕ್ತರಾಗಿದ್ದ ವೇಳೆ ತಿಪ್ಪೇಸ್ವಾಮಿ ನಕಲಿ ಒಸಿಗಳನ್ನು ನೀಡಿರುವ ಬಗ್ಗೆ ಈಗಾಗಲೇ ಆಯುಕ್ತರಿಗೆ ವರದಿಯನ್ನು ನೀಡಲಾಗಿದೆ ಎಂದು ಹೇಳಿದರು.

ಸಿಬಿಐನಂತ ಸಂಸ್ಥೆ ಈ ಬೃಹತ್ ಹಗರಣದ ತನಿಖೆ ನಡೆಸಿದ್ದೇ ಆದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಜೆ.ಜಾರ್ಜ್ ಮತ್ತಿತರ ಭ್ರಷ್ಟ ರಾಜಕಾರಣಿಗಳು, ಪಾಲಿಕೆಯ ನಗರ ಯೋಜನೆ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಬಹುತೇಕ ಭ್ರಷ್ಟ ಅಧಿಕಾರಿಗಳು ಜೈಲು ಪಾಲಾಗುವುದು ನಿಶ್ಚಿತ ಎಂದು ಎನ್.ಆರ್.ರಮೇಶ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ