ರಾಜ್ಯದ ನಾನಾ ಕಡೆ ಪ್ರವಾಹ ಹಿನ್ನಲೆ-ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ಆ.10-ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ನಾನಾ ಕಡೆ ಪ್ರವಾಹ ಉಂಟಾಗಿ ಸಂಕಷ್ಟದಲ್ಲಿರುವ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಅಧಿಕಾರಿಗಳು ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ವರದಿಯನ್ನು ಸಿದ್ದಪಡಿಸುತ್ತಿದ್ದಾರೆ. ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಈ ವರದಿಯನ್ನು ಕಳುಹಿಸಿ ರಾಜ್ಯಕ್ಕೆ ವಿಶೇಷ ನೆರವು ನೀಡುವಂತೆ ಮನವಿ ಮಾಡುವುದಾಗಿ ಹೇಳಿದರು.

ಕೇಂದ್ರದಿಂದ ತುರ್ತು ಪರಿಹಾರ ನೀಡಬೇಕೆಂದು ಕೋರಿದ್ದೆವು. ಈಗಾಗಲೇ ಅಗತ್ಯವಿರುವ ಕಡೆ ಹೆಲಿಕಾಪ್ಟರ್, ರಕ್ಷಣಾ ತಂಡ ಕಳುಹಿಸಿಕೊಟ್ಟಿದ್ದಾರೆ. ನಮ್ಮ ಮನವಿಗೆ ಕೇಂದ್ರವು ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ರಾಜ್ಯಕ್ಕೆ ಇನ್ನು ಹೆಚ್ಚಿನ ನೆರವು ಅಗತ್ಯವಿದೆ ಎಂದು ಬಿಎಸ್‍ವೈ ಅಭಿಪ್ರಾಯಪಟ್ಟರು.

ಯಾವುದೇ ಕಾರಣಕ್ಕೂ ಜನ ಆತಂಕಕ್ಕೆ ಒಳಗಾಗಬಾರದು. ನಿಮ್ಮೊಂದಿಗೆ ಸರ್ಕಾರವಿದೆ. ಏನೇ ಕಷ್ಟಬಂದರೂ ನಾವು ಸ್ಪಂದಿಸುತ್ತೇವೆ. ಅನಗತ್ಯವಾಗಿ ವದಂತಿಗಳಿಗೆ ಕಿವಿಗೊಡಬೇಡಿ. ನಿಮ್ಮ ಕಷ್ಟಕಾರ್ಪಣ್ಯಗಳನ್ನು ಆಲಿಸಲು ಖುದ್ದು ನಾನೇ ಬಂದಿದ್ದೇನೆ. ಧೈರ್ಯದಿಂದ ಇರಬೇಕೆಂದು ಮನವಿ ಮಾಡಿದರು.

ಎಂಥ ಕಷ್ಟ ಬಂದರೂ ನಿಮ್ಮನ್ನು ಕೈಬಿಡುವುದಿಲ್ಲ. ಈಗಾಗಲೇ ಅಧಿಕಾರಿಗಳು ಅಗತ್ಯವಿರುವ ಕಡೆ ನಿರಾಶ್ರಿತರ ತಾಣಗಳನ್ನು ಆರಂಭಿಸಿದ್ದಾರೆ. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ತೆರೆಯಬೇಕೆಂದು ನಾನೇ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಭರವಸೆ ನೀಡಿದರು.

ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗಿದೆ. ಇದನ್ನು ಅಗತ್ಯವಿರುವ ಕಡೆ ಸದ್ಬಳಕೆ ಮಾಡಿಕೊಳ್ಳಬೇಕು. ಸಂತ್ರಸ್ತರಿಗೆ ನೆರವು ಒದಗಿಸಲು ಹಣದ ಕೊರತೆ ಇಲ್ಲ.

ನೀವು ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಇರಿ ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಇಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಆಗಮಿಸಿ ಬೆಳಗಾವಿ ಸೇರಿದಂತೆ ಅನೇಕ ಕಡೆ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ನಾನು ಕೂಡ ಅಧಿಕಾರಿಗಳ ಸಭೆ ನಡೆಸಲಿದ್ದೇನೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿರುವ ಜನರು, ಜಾನುವಾರು ರಕ್ಷಣೆ ಮಾಡುವುದರ ಜೊತೆಗೆ ಮನೆಮಠ ಎಲ್ಲವನ್ನೂ ಕಳೆದುಕೊಂಡಿರುವ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವುದು ನಮ್ಮ ಮೊದಲ ಆದ್ಯತೆ ಎಂದರು.

ಇಂದು ಮತ್ತೆ ನಾಳೆ ನಾನು ದೆಹಲಿಗೆ ಹೋಗುವುದಿಲ್ಲ. ರಾಜ್ಯದಲ್ಲೇ ಇದ್ದು, ಸ್ಥಿತಿಗತಿ ಅವಲೋಕನ ಮಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ