ಬೆಂಗಳೂರಿನಲ್ಲಿ ಕಳೆದ ಮೂರು ವಾರಗಳಿಂದ ಕೊರೊನಾ ಏರಿಕೆಯಾಗುತ್ತಿದ್ದು, ಮೂರನೆ ಅಲೆ ಆತಂಕ ಎದುರಾಗಿದೆ

ಬೆಂಗಳೂರು, ಆ.6- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರು ವಾರಗಳಿಂದ ಕೊರೊನಾ ಏರಿಕೆಯಾಗುತ್ತಿದ್ದು, ಮೂರನೆ ಅಲೆ ಆತಂಕ ಎದುರಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ 78ಕ್ಕೂ ಅಧಿಕ ಅಪಾರ್ಟ್‍ಮೆಂಟ್‍ಗಳನ್ನು ಸೀಲ್‍ಡೌನ್ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ.

ನಗರದಲ್ಲಿ ನಗರದಲ್ಲಿ ಕಳೆದ ತಿಂಗಳಿನಲ್ಲಿ ತೀರಾ ಕಡಿಮೆಯಿದ್ದ ಮೈಕ್ರೋ ಕಂಟೋನ್ಮೆಂಟ್ ಝೋನ್‍ಗಳು ಇದೀಗ ಸಾವಿರದ ಗಡಿ ದಾಟಿವೆ. 777 ಇದ್ದ ಮೈಕ್ರೋ ಕಂಟೈನ್ಮೆಂಟ್‍ಗಳು ಈಗ 1000ಕ್ಕೆ ಏರಿಕೆಯಾಗಿವೆ.

157 ಪ್ರದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಸಕ್ರಿಯವಾಗಿರುವುದು ಆತಂಕದ ವಿಷಯವಾಗಿದೆ. ಮಹದೇವಪುರದಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳು ಹೆಚ್ಚಾಗಿವೆ. 162 ಸೂಕ್ಷ್ಮ ಪ್ರದೇಶಗಳನ್ನು ಗುರುತು ಮಾಡಿದ್ದು, 42 ಅತಿಸೂಕ್ಷ್ಮ ಪ್ರದೇಶಗಳಾಗಿವೆ.

ಉಳಿದಂತೆ ಪೂರ್ವ ವಲಯದಲ್ಲಿ 34 ಮೈಕ್ರೋ ಕಂಟೈನ್ಮೆಂಟ್ ಝೊನ್‍ಗಳಿವೆ. ಬೊಮ್ಮನಹಳ್ಳಿಯಲ್ಲಿ 31, ದಕ್ಷಿಣ ವಲಯ 16, ಯಲಹಂಕ 17, ಆರ್‍ಆರ್ ನಗರ 10, ಪಶ್ಚಿಮ 5 ಹಾಗೂ ದಾಸರಹಳ್ಳಿ ವ್ಯಾಪ್ತಿಯಲ್ಲಿ 2 ಮೈಕ್ರೋಝೋನ್‍ಗಳಿವೆ ಎಂದು ಬಿಬಿಎಂಪಿ ತಿಳಿಸಿದೆ.

ನಗರದ ಅಪಾರ್ಟ್‍ಮೆಂಟ್‍ಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಗುಂಪು ಚಟುವಟಿಕೆಗಳನ್ನು ನಡೆಸದಂತೆ ಅಪಾರ್ಟ್‍ಮೆಂಟ್ ನಿವಾಸಿಗಳ ಸಂಘಕ್ಕೆ ಸೂಚನೆ ನೀಡಿದ್ದು, ಜನರು ಸೇರುವ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ತಿಳಿಸಿದೆ.

ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ಭಾಗಗಳಿಂದ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೆ ಬರುವ ಪ್ರಯಾಣಿಕರ ಸ್ವಾಬ್ ಸಂಗ್ರಹವನ್ನು ಬಿಬಿಎಂಪಿ ಆರಂಭ ಮಾಡಿದೆ.

ಈಗಾಗಲೇ 1736 ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮೆಜಸ್ಟಿಕ್, ಯಶವಂತಪುರ ಕಂಟೈನ್ಮೆಂಟ್, ಕೆಆರ್ ಪುರ ನಿಲ್ದಾಣಗಳಲ್ಲಿ ಪ್ರಯಾಣಿಕರ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಪರೀಕ್ಷಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 414 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಐವರು ಮೃತಪಟ್ಟಿದ್ದಾರೆ. ನಗರದಲ್ಲಿ 8560 ಸಕ್ರಿಯ ಪ್ರಕರಣಗಳು ಇವೆ.

ಬೊಮ್ಮನಹಳ್ಳಿಯಲ್ಲಿ ಡೆಲ್ಟಾ: ಬೆಂಗಳೂರಿನಲ್ಲಿ ಕೋವಿಡ್ ರೂಪಾಂತರಿ ಡೆಲ್ಟಾ ವೈರಸ್ ಪತ್ತೆಯಾಗಿದೆ.

ಬೊಮ್ಮನಹಳ್ಳಿಯಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದ್ದು, ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಹಲವರನ್ನು ಪರೀಕ್ಷೆಗೆ ಒಳಪಡಿಸಿ ಹೋಂ ಕ್ವಾರಂಟೈನ್‍ನಲ್ಲಿಡಲಾಗಿದೆ.

ಬಿಬಿಎಂಪಿ ವಿಶೇಷ ಆಯುಕ್ತರಾದ ರಣದೀಪ್‍ಸಿಂಗ್ ಮಾತನಾಡಿ, ಮೂರು ವಾರಗಳಿಂದ ಕೊರೊನಾ ಪಾಸಿಟಿವ್ ಕೇಸ್‍ಗಳಲ್ಲಿ ಹೆಚ್ಚಳ ಕಂಡುಬಂದಿದೆ. ನಿನ್ನೆ ಒಂದೇ ದಿನ 25 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಹೊರರಾಜ್ಯಗಳಿಂದ ಬರುವವರು ನೆಗೆಟಿವ್ ರಿಪೆÇೀರ್ಟ್ ತರುತ್ತಿಲ್ಲ. ಹಾಗಾಗಿ 9 ತಂಡಗಳ ಮೂಲಕ ಬಸ್, ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ.ಅನ್ಯ ರಾಜ್ಯದವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಕೂಡ ಮಾಡಲಾಗುತ್ತಿದೆ ಎಂದು ಹೇಳಿದರು.

ಹೊರರಾಜ್ಯದ ಪ್ರಯಾಣಿಕರಲ್ಲಿ ಶೇ.2ರಷ್ಟು ಜನರಲ್ಲಿ ಮಾತ್ರ ಪಾಸಿಟಿವ್ ಕಂಡುಬಂದಿದ್ದು, ಅವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಶಿಫ್ಟ್ ಮಾಡಲಾಗಿದೆ. 27 ರಿಂದ 40 ಕೋವಿಡ್ ಸೆಂಟರ್‍ಗಳನ್ನು ಮಾಡುವ ಚಿಂತನೆ ಇದೆ ಎಂದು ಹೇಳಿದರು.

ಎರಡನೆ ಅಲೆಯಲ್ಲಿ ಜಾಗೃತಿ ತಪ್ಪಿ ಹೆಚ್ಚಿನ ಸಾವು-ನೋವಾಗಿತ್ತು ಎಂಬ ವರದಿಯಿತ್ತು. ಅದು ಮರುಕಳಿಸದಂತೆ ಎಚ್ಚರ ವಹಿಸಲಾಗಿದೆ.

ಕೊರೊನಾ ರಿಪ್ರೊಡಿಕ್ಟಿವ್ ರೇಟ್ ಹೆಚ್ಚಾಗಿದೆ. ಕರ್ನಾಟಕದಲ್ಲಿಯೂ ಹೆಚ್ಚಳವಾಗುತ್ತಿದೆ ಎಂಬ ವರದಿ ಇದೆ. ಎರಡನೆ ಅಲೆ, ಮೂರನೆ ಅಲೆ ಎಂದು ಆಲೋಚನೆ ಮಾಡುವುದಕ್ಕಿಂತ ಕೊರೊನಾ ನಿಯಂತ್ರಣದ ವಿಚಾರವಾಗಿ ಹೆಚ್ಚು ಕಾರ್ಯನಿರತವಾಗುತ್ತಿದ್ದೇವೆ ಎಂದು ಹೇಳಿದರು.

ಮಕ್ಕಳ ತಜ್ಞರ ಸಲಹೆಯಂತೆ ಪದ್ಮನಾಭನಗರದಲ್ಲಿ ಮಕ್ಕಳ ಕೋವಿಡ್ ಕೇರ್ ಸೆಂಟರ್ ರೆಡಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಖಾಸಗಿ ಆಸ್ಪತ್ರೆಗಳ ಮಕ್ಕಳ ತಜ್ಞರೊಂದಿಗೆ ಬಿಬಿಎಂಪಿ ನಿರಂತರ ಸಂಪರ್ಕದಲ್ಲಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ