ಬೆಂಗಳೂರು,ಆ.6- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಅಸಮತೋಲನದಿಂದ ಕೂಡಿದ್ದು, ಮೇಲ್ವರ್ಗಕ್ಕೆ ಮಣೆ ಹಾಕಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆರೋಪಿಸಿದರು.
ಶೇ.60ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯ ಪ್ರತಿನಿಧಿಸುವವರಿಗೆ 10 ಸಚಿವ ಸ್ಥಾನಗಳನ್ನು ಮಾತ್ರ ನೀಡಲಾಗಿದೆ. ಶೇ.20ರಿಂದ 30ರಷ್ಟು ಜನ ಸಂಖ್ಯೆ ಹೊಂದಿರುವ ಸಮುದಾಯಗಳಿಗೆ ಹೆಚ್ಚು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಾದೇಶಿಕ ಸಮತೋಲನವನ್ನು ಸಚಿವ ಸಂಪುಟದಲ್ಲಿ ಕಾಪಾಡಿಲ್ಲ. ರಾಜ್ಯದ 13 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲದಂತಾಗಿದೆ. ಅದರಲ್ಲೂ ದಲಿತರು, ಮಹಿಳೆಯರು ಹಾಗೂ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಟೀಕಿಸಿದರು.
ಪರಿಶಿಷ್ಟ ಜಾತಿ, ಬಲಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸೂಕ್ತ ಪ್ರಾತಿನಿಧ್ಯವನ್ನು ಸಂಪುಟದಲ್ಲಿ ನೀಡದೆ ಅವಮಾನ ಮಾಡಲಾಗಿದೆ. ಬಿಜೆಪಿ ಮತ್ತು ಸರ್ಕಾರ ಈ ಸಮುದಾಯವನ್ನು ಕಡೆಗಣಿಸಿವೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು.
ಸಂಪುಟದಲ್ಲಿ ಪ್ರಾದೇಶಿಕ, ಜಾತಿವಾರು ಪ್ರಾತಿನಿಧ್ಯ ನೀಡಿ ಸಮತೋಲನ ಕಾಪಾಡಿಕೊಳ್ಳಬೇಕಿತ್ತು. ಆದರೆ, ಕೆಲವೇ ಸಮುದಾಯವನ್ನು ಓಲೈಕೆ ಮಾಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಬಹಳಷ್ಟು ಸಮುದಾಯಗಳಿಗೆ ಇದರಿಂದ ಅಸಮಾಧಾನವಾಗಿದೆ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.