ಬೆಂಗಳೂರು, ಆ.4- ಕೊನೆ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಇಂದು 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಮಹತ್ವದ ಬೆಳವಣಿಗೆಯಲ್ಲಿ ಗಟ್ಟಿ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಕೈ ಬಿಟ್ಟಿದ್ದಾರೆ.
ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದ 7 ಮಂದಿಗೆ ಕೋಕ್ ನೀಡಲಾಗಿದೆ. ಬಹುನಿರೀಕ್ಷಿತ ಬಿ.ವೈ.ವಿಜಯೇಂದ್ರ ಮತ್ತು ರೇಣುಕಾಚಾರ್ಯ ಅವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ.
ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಸಾರಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಸಿ.ಪಿ.ಯೋಗೇಶ್ವರ್, ಎಚ್.ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ದಕ್ಕಿಲ್ಲ.
ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರೂ ಕೂಡ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಮೇಲುಗೈ ಸಾಧಿಸಿದ್ದು, ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿದೆ.
ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಸುರೇಶ್ಕುಮಾರ್, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ್, ಆರ್.ಶಂಕರ್, ಶ್ರೀಮಂತಪಾಟೀಲ್ ಅವರುಗಳನ್ನು ಕೈ ಬಿಡಲಾಗಿದೆ.
ಲೈಂಗಿಕ ಹಗರಣದ ಆರೋಪಕ್ಕೆ ಸಿಕ್ಕಿರುವ ರಮೇಶ್ ಜಾರಕಿಹೊಳಿ ಅವರಿಗೆ ಅವಕಾಶ ನೀಡಿಲ್ಲ. ಬಹಳ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಸಂಪುಟದಲ್ಲಿ ಜಾರಕಿಹೊಳಿ ಕುಟುಂಬ ಹೊರಗುಳಿದಿರುವುದು ಅಚ್ಚರಿಗೆ ಕಾರಣವಾಗಿದೆ.
ಬಾಲಚಂದ್ರ ಜಾರಕಿಹೊಳಿ ಅವರು ಸಂಪುಟಕ್ಕೆ ಸೇರುತ್ತಾರೆ ಎಂದು ಹೇಳಲಾಗಿತ್ತಾದರೂ ಅವಕಾಶ ನಿರಾಕರಿಸಲಾಗಿದೆ.
ಕಾರ್ಯಕರ್ತರ ಹರ್ಷೋದ್ಘಾರ, ಜೈಕಾರಗಳ ನಡುವೆ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದರು.
ಪ್ರಾದೇಶಿಕತೆ, ಸಾಮಾಜಿಕ ನ್ಯಾಯ, ಹಳಬರು ಹಾಗೂ ಹಿರಿಯರನ್ನು ಒಳಗೊಂಡ ಸಮತೋಲನದ ಸಂಪುಟ ರಚನೆಯಾಗಿದೆ.
ಈ ಬಾರಿಯ ಸಂಪುಟದಲ್ಲಿ 8 ಲಿಂಗಾಯಿತ, 7 ಒಕ್ಕಲಿಗ, ಹಿಂದುಳಿದ ವರ್ಗ 7, ಪರಿಶಿಷ್ಟ ಜಾತಿ 3 , ಪರಿಶಿಷ್ಟ ಪಂಗಡ 1, ಬ್ರಾಹ್ಮಣ 1, ರೆಡ್ಡಿ 1, ಮಹಿಳಾ ಕೋಟಾದಲ್ಲಿ 1 ಸ್ಥಾನ ನೀಡಲಾಗಿದೆ.
ಎಂದಿನಂತೆ ಈ ಬಾರಿಯ ಸಂಪುಟದಲ್ಲಿ ರಾಜಧಾನಿ ಬೆಂಗಳೂರಿಗೆ ಸಿಂಹಪಾಲು ಸಿಕ್ಕಿದ್ದರೆ, ಶಿವಮೊಗ್ಗ, ಹಾವೇರಿ , ಬೆಳಗಾವಿಗೆ ತಲಾ ಎರಡೆರಡು, ರಾಯಚೂರು, ಯಾದಗಿರಿ, ವಿಜಯಪುರ, ಮೈಸೂರು, ಹಾಸನ, ಮಡಿಕೇರಿ, ರಾಮನಗರ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ.
ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು:
1. ಅರಗ ಜ್ಞಾನೇಂದ್ರ-ತೀರ್ಥಹಳ್ಳಿ
2. ಹಾಲಪ್ಪ ಆಚಾರ್-ಯಲಬುರ್ಗ
3. ಶಂಕರ ಪಾಟೀಲ್ ಮುನೇನಕೊಪ್ಪ-ನವಲಗುಂದ
4. ಮುರುಗೇಶ್ ನಿರಾಣಿ-ಬೀಳಗಿ
5. ಶ್ರೀರಾಮುಲು-ಮೊಳಕಾಲ್ಮೂರು
6. ಶಶಿಕಲಾ ಜೊಲ್ಲೆ-ನಿಪ್ಪಾಣಿ
7. ಆರ್.ಅಶೋಕ್-ಪದ್ಮನಾಭನಗರ
8. ಬೈರತಿ ಬಸವರಾಜು-ಕೆ.ಆರ್.ಪುರಂ
9. ಎಸ್.ಟಿ.ಸೋಮಶೇಖರ್-ಯಶವಂತಪುರ
10. ಡಾ.ಕೆ.ಸುಧಾಕರ್-ಚಿಕ್ಕಬಳ್ಳಾಪುರ
11. ಎಂ.ಟಿ.ಬಿ.ನಾಗರಾಜ್-ಮೇಲ್ಮನೆ
12. ಕೆ.ಸಿ.ನಾರಾಯಣಗೌಡ-ಕೆ.ಆರ್.ಪೇಟೆ
13. ಬಿ.ಸಿ.ಪಾಟೀಲ್-ಹಿರೇಕೆರೂರು
14. ಮುನಿರತ್ನ-ಆರ್.ಆರ್.ನಗರ
15. ವಿ.ಸೋಮಣ್ಣ-ಗೋವಿಂದರಾಜನಗರ
16. ಉಮೇಶ್ ಕತ್ತಿ-ಹುಕ್ಕೇರಿ
17. ಪ್ರಭುಚವ್ಹಾಣ್-ಔರಾದ್
18. ಕೆ.ಗೋಪಾಲಯ್ಯ-ಮಹಾಲಕ್ಷ್ಮಿಲೇಔಟ್
19. ಅಶ್ವತ್ಥನಾರಾಯಣ-ಮಲ್ಲೇಶ್ವರಂ
20. ಶಿವರಾಂ ಹೆಬ್ಬಾರ್-ಯಲ್ಲಾಪುರ
21. ಎಸ್.ಅಂಗಾರ- ಸುಳ್ಯ
22. ಕೋಟಾ ಶ್ರೀನಿವಾಸಪೂಜಾರಿ -ಮೇಲ್ಮನೆ
23. ಆನಂದ್ಸಿಂಗ್-ಹೊಸಪೇಟೆ
24. ಬಿ.ಸಿ.ನಾಗೇಶ್- ತಿಪಟೂರು
25. ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ
26. ಸುನೀಲ್ಕುಮಾರ್-ಕಾರ್ಕಳ
27. ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ
28. ಗೋವಿಂದ ಕಾರಜೋಳ-ಮುಧೋಳ
29. ಸಿ.ಸಿ.ಪಾಟೀಲ್-ನರಗುಂದ