ಲಾಕ್‍ಡೌನ್‍ನಿಂದ ರಾಜ್ಯದ ಬೊಕ್ಕಸ ಭಾಗಶಃ ಖಾಲಿಯಾಗಿ ಸಂಪೂರ್ಣ ಆರ್ಥಿಕತೆ ಚೇತರಿಕೆ ಅಸಾಧ್ಯ!

ಬೆಂಗಳೂರು,ಆ.2- ಕೋವಿಡ್ ಹಾಗೂ ಲಾಕ್‍ಡೌನ್‍ನಿಂದ ರಾಜ್ಯದ ಬೊಕ್ಕಸ ಭಾಗಶಃ ಖಾಲಿಯಾಗಿ ಸಂಪೂರ್ಣ ಆರ್ಥಿಕತೆ ಚೇತರಿಕೆ ಅಸಾಧ್ಯ. ಇದನ್ನು ಮನಗಂಡಿರುವ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವೆಚ್ಚ ಕಡಿತ ಹಾಗೂ ಬದ್ಧ ವೆಚ್ಚ ಕಡಿತಕ್ಕೆ ಮುಂದಾಗಿದ್ದಾರೆ.

ಕೋವಿಡ್ ಹಾಗೂ ಲಾಕ್‍ಡೌನ್‍ನಿಂದ ರಾಜ್ಯ ಸಂಪೂರ್ಣವಾಗಿ ನಲುಗಿ ಹೋಗಿದೆ. ಇದರ ಪ್ರಹಾರಕ್ಕೆ ಸರ್ಕಾರ ಆದಾಯವಿಲ್ಲದೆ ಮಂಡಿಯೂರುವ ಪರಿಸ್ಥಿತಿ ಎದುರಾಗಿದೆ. ಇತ್ತ ಕೋವಿಡ್ 3ನೇ ಅಲೆಯ ಭೀತಿ ಎದುರಾಗಿದ್ದು, ಸಂಪೂರ್ಣ ಅನ್‍ಲಾಕ್ ಕನಿಷ್ಠ ಡಿಸೆಂಬರ್‍ವರೆಗೆ ಅನುಮಾನವಾಗಿದೆ.

ಹೀಗಾಗಿ ರಾಜ್ಯದ ಬೊಕ್ಕಸ ತುಂಬುವ ಲಕ್ಷಣ ಕಾಣುತ್ತಿಲ್ಲ. ಸರ್ಕಾರ ಹಣಕಾಸು ನಿರ್ವಹಣೆಗಾಗಿ ಸಾಲದ ಮೊರೆ ಹೋಗಿದೆ. ಇದರ ಜತೆಗೆ ವೆಚ್ಚ ಕಡಿತ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದ್ದಾರೆ.

ವೆಚ್ಚ ಕಡಿತದ ಜತೆಗೆ ಬದ್ಧ ವೆಚ್ಚಕ್ಕೂ ಅಂಕುಶ ಹಾಕಲು ಮುಂದಾಗಿದ್ದಾರೆ. ಆ ಮೂಲಕ ಆದಾಯ ಕೊರತೆ ಹೊರೆ ತಗ್ಗಿಸುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಏನಿದು ಬದ್ಧ ವೆಚ್ಚದ ಹೊರೆ?:
ಸರ್ಕಾರಿ ನೌಕರರಿಗೆ ನೀಡುವ ವೇತನ, ಸಾಮಾಜಿಕ ಭದ್ರತಾ ಪಿಂಚಣಿ, ನಿವೃತ್ತಿ ವೇತನ, ದಿನಗೂಲಿ ನೌಕರರ ವೇತನ, ಗುತ್ತಿಗೆ ನೌಕರರಿಗೆ ನೀಡುವ ವೇತನ, ರಾಜ್ಯ ತೆಗೆದುಕೊಂಡಿರುವ ಸಾಲದ ಮೇಲಿನ ಬಡ್ಡಿ, ಆಡಳಿತಾತ್ಮಕ ವೆಚ್ಚ, ಸಹಾಯಧನವನ್ನು ಬದ್ಧ ವೆಚ್ಚ ಎಂದು ಕರೆಯಲಾಗುತ್ತದೆ.

ಹಲವು ವರ್ಷಗಳಿಂದ ಆಯವ್ಯಯದ ಗಾತ್ರ ಏರಿಕೆ ಕಾಣುತ್ತಿದ್ದರೂ, ಅದರಲ್ಲಿನ ಗಣನೀಯ ಪ್ರಮಾಣ ಬದ್ಧ ವೆಚ್ಚಕ್ಕೆ ಹೋಗುತ್ತದೆ. ಬಜೆಟ್ ಗಾತ್ರದಲ್ಲಿ ಶೇ.75-80 ಬದ್ಧ ವೆಚ್ಚಕ್ಕೆ ಖರ್ಚಾಗುತ್ತದೆ. ಅದರಲ್ಲಿಯೂ 2021-22 ಸಾಲಿನಲ್ಲಿ ಈ ಬದ್ಧ ವೆಚ್ಚ ಇನ್ನಷ್ಟು ಏರಿಕೆಯಾಗಿದೆ.

2020-21 ಸಾಲಿಗೆ ಹೋಲಿಸಿದರೆ 2021-22ರಲ್ಲಿ ಬದ್ಧ ವೆಚ್ಚ 8,210 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2019-20ರಲ್ಲಿ ಬದ್ಧ ವೆಚ್ಚ 1,74,257 ಕೋಟಿ ರೂ. ಆಗಿದ್ದರೆ, 2020-21ರಲ್ಲಿ ಅದು 1,79,195 ಕೋಟಿ ರೂ.ಗೆ ಏರಿಕೆಯಾಗಿದೆ.

2021-22 ಸಾಲಿನ 1,87,405 ಕೋಟಿ ರೂ.ಗೆ ಏರಿಕೆಯಾಗಿದೆ. ಆ ಮೂಲಕ ಈ ಬಾರಿ ಬಜೆಟ್ ಗಾತ್ರದ ಶೇ.76.1ರಷ್ಟು ಹಣ ಬದ್ಧ ವೆಚ್ಚಕ್ಕೆ ತಗುಲುತ್ತಿದೆ.

ಉಳಿದ ಹಣ ಮಾತ್ರ ಅಭಿವೃದ್ಧಿ ಯೋಜನೆಗಳಿಗೆ ಲಭ್ಯವಾಗುತ್ತಿದೆ. 2021-22ನೇ ಸಾಲಿನಲ್ಲಿ 1,72,271 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ಹೊಂದಲಾಗಿದೆ.

ರಾಜಸ್ವ ಸ್ವೀಕೃತಿ (ತೆರಿಗೆ ಆದಾಯ)ಗಿಂತಲೂ ಬದ್ಧ ವೆಚ್ಚವೇ ಹೆಚ್ಚಿದೆ. ರಾಜಸ್ವ ಸಂಗ್ರಹಕ್ಕಿಂತ 15,134 ಕೋಟಿ ರೂ.ರಷ್ಟು ಬದ್ಧ ವೆಚ್ಚವೇ ಹೆಚ್ಚಾಗಿದೆ.

ಕನಿಷ್ಠ ಶೇ.5 ವೆಚ್ಚ ಕಡಿತದ ಗುರಿ: ಎಲ್ಲಾ ಇಲಾಖೆಗಳು ಕನಿಷ್ಠ ಶೇ.5ರಷ್ಟು ವೆಚ್ಚ ಕಡಿತಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಟಾಸ್ಕ್ ನೀಡಿದ್ದಾರೆ.

ಆದರೆ ಆರ್ಥಿಕ ಇಲಾಖೆ ಅಧಿಕಾರಿಗಳು ಶೇ.5ರ ವೆಚ್ಚ ಕಡಿತ ಕಾರ್ಯ ಸಾಧು ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.ಈಗಾಗಲೇ ಎಲ್ಲಾ ಇಲಾಖೆಗಳು ವೆಚ್ಚ ಕಡಿತಗೊಳಿಸಿದ್ದು, ಅಗತ್ಯ ಉದ್ದೇಶಕ್ಕಾಗಿ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತಿದೆ. ಮತ್ತಷ್ಟು ವೆಚ್ಚ ಕಡಿತಗೊಳಿಸಿದರೆ ಇಲಾಖೆಯ ಮೂಲ ಅಗತ್ಯಗಳಿಗೆ ಹಣ ಸಿಗುವುದು ಕಷ್ಟ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ವೆಚ್ಚ ಕಡಿತದ ಮೊರೆ ಹೋಗಿದೆ. ಅದರಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆಡಳಿತ ವೆಚ್ಚವನ್ನು 288 ಕೋಟಿ ರೂ. ವಷ್ಟು ಕಡಿತ ಮಾಡಲಾಗಿದೆ. ಅದೇ ರೀತಿ ಸಹಾಯ ಧನ ಸಹಾಯದ ಹೊರೆಯನ್ನು 1,694 ಕೋಟಿ ರೂ.ಗೆ ಕಡಿತ ಮಾಡಲಾಗಿದೆ.
ವಿವಿಧ ವೆಚ್ಚಗಳಲ್ಲಿ ಇನ್ನಷ್ಟು ಕಡಿತಗೊಳಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಆ ಮೂಲಕ ಬೊಕ್ಕಸದ ಮೇಲಾಗುತ್ತಿರುವ ಈ ಅನುತ್ಪಾದಕ ಕೆಲ ಬದ್ಧವೆಚ್ಚಗಳ ಹೊರೆ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ. ಬದ್ಧ ವೆಚ್ಚದ ಏರಿಕೆ ಹೀಗಿದೆ:
ವೇತನ:
2021-22- 38,626 ಕೋಟಿ
2020-21- 37,080 ಕೋಟಿ
ಬಡ್ಡಿ:
2021-22- 27,161 ಕೋಟಿ
2020-21- 22619 ಕೋಟಿ
ಪಿಂಚಣಿ:
2021-22- 23,413 ಕೋಟಿ
2020-21- 22214 ಕೋಟಿ
ಸಹಾಯಧನ:
2021-22- 19,774 ಕೋಟಿ
2020-21- 21,468 ಕೋಟಿ
ಇತರೆ ಆದಾಯ ವೆಚ್ಚ:
2021-22- 27,677 ಕೋಟಿ
2020-21- 26,189 ಕೋಟಿ
ಆಪರೇಷನ್ ಮತ್ತು ನಿರ್ವಹಣಾ ವೆಚ್ಚ:
2021-22- 41,748 ಕೋಟಿ
2020-21- 40,294 ಕೋಟಿ
ಆಡಳಿತಾತ್ಮಕ ವೆಚ್ಚ:
2021-22- 3040 ಕೋಟಿ
2020-21- 3328 ಕೋಟಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ